ವೃತ್ತ

ಮಧು signal ಹತ್ರ ಕರ್ಚಿಫ್ ಮಾರಿ ಬಂದ ಹಣದಲ್ಲಿ ಮುದ್ದೆ ಊಟ ಮಾಡೋಕೆ ಅಂತ ಹೋಗ್ಬರೋದ್ರೊಳಗೆ, ಅವನ ಖಾಯಂ ಕಲ್ಲು ಬೆಂಚಿನ ಜಾಗದಲ್ಲಿ ಯಾರೋ ಬಂದು ಡೇರಾವು ಹಾಕಿರೋದು ನೋಡಿ.. ಪಿತ್ತ ನೆತ್ತಿಗೆ ಎರ್ತು.. ಆಕಡಿಕ್ಕೆ ಮಕಾ ಮಾಡಿ ಮಲ್ಕೊಂಡಿದ್ದ ವ್ಯಕ್ತಿ ಭುಜ ಅಲ್ಲಾಡಿಸಿ... "ಯ್ಯೋ ಎಳ್ಯಯ್ಯ ಮೇಲೆ.. ಸ್ವಲ್ಪ ಹೊತ್ತು ಮನಿಕೋಬೇಕು" ಎಂದ ಮಧು.
ಜಪ್ಪಯ್ಯ ಅಂದ್ರು ತಿರುಗಲಿಲ್ಲ... ಸತಗಿತ್ ಹೋಗಬುಟವ್ನ, ಎನ್ ಗತಿ ಅಂತ.. ಮತ್ತೆ ಮೆಲ್ಲಗೆ ಭುಜ ತಟ್ಟಿ.. "ಯ್ಯೋ... ಏಳು... ಎಂದ

ಈ ಕಡಿಕ್ಕೆ ತಿರ್ಗಿದ ಒಬ್ಬ ಹುಡುಗ.. ದೇಹ ಬೆಳೆದಿತ್ತು ಆದ್ರೆ ಮುಖ ಎಳಸು...ಅಳ್ತಾ ಇದ್ದ....
ಅಳೋ ಹುಡುಗನ ನೋಡಿ ಕಸಿವಿಸಿಯಾಯಿತು ಮಧುಗೆ. ಮುದ್ದೆ ಉಂಡಮೇಲೆ ಒಂದು ತಾಸು ಅಂಗಾತ ಮನಿಕೊಂಡ್ರೆ ಮೈಯಲ್ಲಿ ಇರೋ ಆಯಾಸ ಎಲ್ಲಾ ಮಂಗಮಾಯ. ಎಷ್ಟೇ ಬಿಸಿಲು ಇದ್ರು ಆ ಪಾರ್ಕಿನಲ್ಲಿ ಮರದ ಕೆಳಗೆ ಇದ್ದ ಬೆಂಚಿನ ಮೇಲೆ ಮಲಗಿದರೆ ಮಧುಗೆ ಅಮ್ಮನ ಮಡಿಲಲ್ಲಿರುವ ಪುಟ್ಟ ಮಗುವಿನ ಅನುಭವ.
ಆದ್ರೆ ಇವ್ನು ಯಾವೋನ್ಲ ನನ್ನ ಟೇಮು ಹಾಳು ಮಾಡತಾವ್ನೆ, ಅತ್ಕೊಂಡು ಸುರ್ಕೊಂಡು...ಅಂತ ಮನಸಲ್ಲೇ ಗೊಣಗಿ.. ಅವನ ಮುಖ ದಿಟ್ಟಿಸಿದ...
ಹೇ....ಇವ್ನು......ಆ ಮೂಲೆ ಮನೆ ಪೆದ್ದ ಮಗ ಅಲ್ವಾ...."ಹೇ ಯಾಕೋ ಅಳೋದು..ಅಳ್ಬೇಡ ಕಣೋ................ಹೊಟ್ಟೆ ಹಸಿತದ.."

ಆ ಹುಡುಗ ಅಳ್ತಾ... "ಹ್ಞೂ.... ಊಟ ಬೇಕುಉ ಉ.....ಆ... ಅಮ್ಮಾs..... ಅಮ್ಮ..." ಎಂದು ಜೋರಾಗಿ ಅಳಲು ಶುರು ಮಾಡಿದ.

ಮಧು ಗಾಬರಿಗೊಂಡ., ಯಾರಾದ್ರೂ ಇವನು ಅಳೋದು ನೋಡಿ ನನ್ನ ತಪ್ಪು ತಿಳ್ಕೊಂಡು ಎರಡು ಬಾರಿಸಿದ್ರೆ ಎನ್ ಮಾಡೋದು ಅಂತ.

"ಲೋ.. ಲೋ. ಅಳ್ಬೇಡವೋ... ನಿನ್ನ ದಮಯ್ಯ... ಊಟ ಕೊಡಿಸ್ತೀನಿ ಇರು..ಕೈ ಮುಗಿತೀನಿ ರಾಜ ಸ್ವಲ್ಪ ಸಮಾಧಾನ ಮಾಡ್ಕೋ... ಇಂದ ಈ ನೀರು ಕುಡಿ..."
ಅಂತ ಕೈಲಿದ್ದ ಹಳೆ ನೀರಿನ ಬಾಟಲಿ ಕೊಟ್ಟು ಬೆನ್ನು ಸವರಿದ...

ಗಟ ಗಟ ಅಂತ ನೀರು ಕುಡಿದು.. ಮೂಗು ವರೆಸಿಕೊಂಡ... ಆ ಹುಡುಗ... "ನಂಗೆ ಮಸಾಲೆ ದೋಸೆ ಬೇಕು...." ಎಂದ

ಅವತ್ತು ಬೆಳ್ಳಿಗೆನೇ, ಒಂದು ಚೂರು ಚೌಕಸಿ ಮಾಡದೆ ಒಬ್ಬ ಮಹಿಳೆ ಮಧು ಹತ್ತಿರವಿದ್ದ ಚಿಕ್ಕ ಚಿಕ್ಕ ಟರ್ಕಿ ಟವೆಲ್ಗಳ ವ್ಯಾಪಾರ ಮಾಡಿ ಇದ್ದ ಎಂಟು ಟವೆಲ್ ಖರೀದಿಸಿದ್ದಳು. ಈಗ ಅವನ ಬಳಿ ಇಪ್ಪತ್ತು ಬಿಳಿ ಕರ್ಚಿಫ್ ಮಾತ್ರ ಉಳಿದಿತ್ತು.ಮಧ್ಯಾಹ್ನದ ಹೊತ್ತಿಗೆ ನಾಲ್ಕು ಮಾರಿ ಆಗಿತ್ತು.

ಅದು ಯಾರೋ ದಡೂತಿ ಮನುಷ್ಯ..ಹೆಜ್ಜೆ ಇಡುತ್ತಿದ್ದ ಹಾಗೆಲ್ಲ ಬೆವರುತಿದ್ದ..ಸಿಗ್ನಲ್ ಬಳಿ ನಿಂತಿದ್ದ ಮಧುವಿನ ಹತ್ತಿರ ಒಂದು ಕರ್ಚಿಫ್ ತೊಗೊಂಡು ₹100 ಕೊಟ್ಟು ಹೊರಟೇ ಬಿಟ್ಟ. ಬೆವರು ಸುರಿಸಿ ಕಷ್ಟ ಪಟ್ಟು ದುಡೀಬೇಕು ಅಂತಾರೆ.. ಆದ್ರೆ ಇಲ್ಲಿ ಬೆವರು ಸುರಿಸಿದ್ದು ಆ ಗ್ರಾಹಕ. ಮತ್ತೊಂದು ಕರ್ಚಿಫ್, ಕಾಲಲ್ಲಿ ಕೀವು ಸೋರುತ್ತಿದ್ದ ವ್ಯಕ್ತಿ ಖರೀದಿಸಿದ. ಎಪ್ಪತ್ತರ ಆಸು ಪಾಸು ಇರ್ಬೇಕು ಆ ಮನುಷ್ಯನಿಗೆ, ಕೈಯಲ್ಲಿ ಸುದರ್ಶನ್ ಸಿಲ್ಕ್ಸ್ ಕವರ್ ಇತ್ತು. ಬಸ್ ಇಳಿದಾಗ ಕಾಲಿನಲ್ಲಿದ್ದ ಗಾಯದಿಂದ ಕೀವು ಹೊಡೆದು ಸೊರಲು ಶುರುವಾಯಿತು, ಬಸ್ ಸ್ಟಾಫ್ ಹಿಂಬದಿಗೆ ಹೋಗಿ ತನ್ನ ಕವರಿನಲಿದ್ದ ನೀರಿನ ಬಾಟಲಿ ತೆಗೆದು ಕೀವು ಸೋರುತ್ತಿದ್ದ ಜಾಗಕ್ಕೆ ಸುರಿದರು. ಮಧು ಇದನೆಲ್ಲ ನೋಡುತಿದ್ದ, ಅವನು ಅವರ ಬಳಿಗೆ ಹೋಗಿ "ಅಣ್ಣಾ ಅಲ್ಲಿ ರಸ್ತೆ ದಾಟಿದರೆ ನರ್ಸಿಂಗ್ ಹೋಮ್ ಇದೆ. ಅಲ್ಲಿಗೆ ಹೋಗಿ ಟಿನ್ಚರ್ ಹಾಕಿಸಿಕೊಳ್ಳಿ " ಎಂದ.

ಅವರು ತಲೆ ಆಡಿಸಿ, ಬಾ ಎಂದು ಕೈ ಸನ್ನೆ ಮಾಡಿದರು.
ಅವರ ಬಳಿ ಹೋದ ಮಧು, ಅವರು ಒಂದು ಕರ್ಚಿಫ್ ತೊಗೊಂಡು ಆ ಗಾಯದಮೇಲೆ ಇದ್ದ ಕೀವು ಓರೆಸಿ ., ಮೆಲ್ಲಗೆ ರಸ್ತೆ ದಾಟಿ ನರ್ಸಿಂಗ್ ಹೋಮ್ ಕಡೆಗೆ ಹೋದರು. ಕೊಟ್ಟಿದ್ದು ಇಪತ್ತು ರೂಪಾಯಿ ಮಾತ್ರ. ಬಿಟ್ಟಿ ಸಲಹೆ ಜೊತೆ ರಸ್ತೆ ದಾಟಿಸುವ ಸೌಭಾಗ್ಯವು ಮಧು ಪಾಲಿಗೆ ಬಂತು. ಕೆಲವೊಮ್ಮೆ ಹಂಗೆ ಸ್ವಾಮಿ., ಮನುಷ್ಯತ್ವ ಮೆರೆಯುವಾಗ ಲಾಭ ನಷ್ಟ ನೋಡಬಾರ್ದು. ಯಾಕಂದ್ರೆ ನಮ್ಮ ಖಾತೆಗೆ ಒಳ್ಳೆ ಮಾರ್ಕ್ಸ್ ಜಮಾ ಆಗ್ತಿರುತ್ತೆ.

ಇನ್ನೊಂದು ಕರ್ಚಿಫ್ ಒಬ್ಬರು ₹5 ಚೌಕಸಿ ಮಾಡಿ ₹35 ಕೊಟ್ಟು ತೆಗೆದುಕೊಂಡು ಹೋದರು.

ಅವತ್ತು ವ್ಯಾಪಾರ ಜೋರು, ರಸ್ತೆಯ ಕೊನೆಯಲ್ಲಿ ಮುದ್ದೆ ಊಟದ ವ್ಯಾನ್ ಬಂದು ನಿಲ್ಲುತ್ತದೆ. ಅದೆಷ್ಟು ಜನ ತಿಂತಾರಪ್ಪ ಅಲ್ಲಿ. ದಂಟು ಸೊಪ್ಪಿನ ಹುಳಿ ಮುದ್ದೆ, ಒಂದು ಆಂಬೊಡೆ ಮತ್ತೆ ಮಜ್ಜಿಗೆ ಇಷ್ಟಕ್ಕೆ ₹50. ಹೊಟ್ಟೆ ತುಂಬುತ್ತೆ, ಸಣ್ಣಗೆ ಜೋoಪು ಏರಿ ನಿದ್ರಾ ದೇವಿಗೆ ಶರಣು ಮಾಡಿಸುತ್ತದೆ.

ಸರಿ ಕಥೆ ಮುಂದಕ್ಕೆ ಹೋಗ್ಬೇಕು, ಈ ಸಣ್ಣ ಫ್ಲಾಶ್ಬಕ್ ಸುಮ್ನೆ ಸ್ವಲ್ಪ ಆ ದಿನದ ಆ ವೇಳೆಯವರೆಗು ಝಲಕ್ ಕೊಡುವುದಕ್ಕೆ ಅಷ್ಟೇ.

ಬಂದಿದ್ದ ದುಡ್ಡಲ್ಲಿ ಊಟ ಆಯಿತು ರಾತ್ರಿ ಊಟಕ್ಕೂ ತಲೆ ನೋವ್ವು ಇಲ್ಲಾ ಅನ್ಕೊಂಡಿದ್ದ ಮಧು.. ಆದ್ರೆ ಇದ್ಯಾವುದಪ್ಪ ಇದು ದೋಸೆ ಪಾರ್ಟಿ..₹80 ದೋಸೆ ಕೊಟ್ರೆ ಹೆಂಗೆ... ಎಲ್ಲಿಂದ ತಂದು ಕೊಡ್ಲಿ ಈ ಹೊತ್ತಿನಲ್ಲಿ ಅನ್ಕೊಂಡ ಮಧು.

"ಏಳು ಬಾ.. ಅಲ್ಲಿ ಹೋಟೆಲಲ್ಲಿ ಕೊಡಿಸ್ತಿನಿ... ಎಂದ.."

"ನಾನು ಬರಲ್ಲ... ಅಮ್ಮಾ ನಂಗೆ ತುಂಬಾ ಹಸಿವು... ಉ... ಉ..." ಅಂತ ಪುಟ್ಟ ಮಕ್ಕಳ ಹಾಗೆ ಅಳತೊಡಗಿದ.

ಬಯೋಕೆ ಮನಸ್ಸು ಇದ್ದರು, ಏನೋ ಲೆಕ್ಕಚಾರ ಹಾಕಿ. ಇವನು ಹೋಟೆಲಿಗೆ ಬರೋದು ಇನ್ನು ಏನಾದ್ರು ಬೇಕು ಅನ್ನೋದು, ಅಲ್ಲಿ ಇವನನ್ನ ಯಾರಾದ್ರೂ ಗುರುತಿಸೋದು.. ನಂಗೆ ಯಾಕೆ ಬೇಕು.. ಇಲ್ಲಿ ಇರ್ಲಿ ನಾನೇ ತಂದು ಕೊಟ್ಟು ಜಾಗ ಖಾಲಿ ಮಾಡಿಸ್ತಿನಿ ಇಲ್ಲಿಂದ ಅಂದುಕೊಂಡ ಮಧು.

"ಹ್ಞೂ ಸರಿ ಸರಿ.. ಮನಿಕೊಂಡಿರು.. ಯಾರು ಕರೆದರೂ ಹೀಗಬೇಡ.. ಬತೀನಿ ದೋಸೆ ತೊಗೊಂಡು.."ಎಂದು ಹೊರಟ.

ಯಾವ ಹೋಟೆಲ್ಗೆ ಹೋದ್ರೆ ಕಮ್ಮಿ ಅಯ್ಥದೇ ಅಂತ ಲೆಕ್ಕ ಹಾಕಿ ಒಂದು ಫಾರಲಾಂಗ್ ನೆಡೆದು ಸಣ್ಣ ದರ್ಶಿನಿಯಲ್ಲಿ ದೋಸೆ ತೊಗೊಂಡು, ನೀರು ಬಾಟಲಿಯಲ್ಲಿ ನೀರು ತುಂಬಿಸಿಕೊಂಡು ಬಂದ.

ದಾರಿಯಲ್ಲಿ ನೂರಾರು ಆಲೋಚನೆ ಅವ್ನು ಅಲ್ಲೇ ಇರ್ತಾನ, ಅವ್ನು ಹೋಗಿದ್ರೆ ಈ ದೋಸೆ ಎನ್ ಮಾಡ್ಲಿ, ಹೊಟ್ಟೆ ಬೇರೆ ತುಂಬಿದೆ. ರಾತ್ರಿ ಅಷ್ಟೊತ್ತಿಗೆ ಚಟ್ನಿ ಅಳಸಿಹೋಗುತ್ತೆ. ಎನ್ ಮಾಡ್ಲಿ... ಎನ್ ಮಾಡ್ಲಿ.. ಅಂತ ಬೇಗ ಬೇಗ ಬೆಂಚಿನ ಬಳಿ ಬಂದ. ಆ ಹುಡುಗ ಅಲ್ಲೇ ಇದ್ದ... ಪೆದ್ದು ಪೆದ್ದಾಗಿ ನೋಡ್ತಾ... ಮೂಗಿನಳೋಗೆ ಬೆರಳಾಡಿಸಿ..ತನ್ನ ಸಿಂಬಳದೊಂದಿಗೆ ಆಟವಾಡುತಿದ್ದ..."ಥು ಹೋಗಪ್ಪ, ನಮಗೆ ಸಿಗೋರೆಲ್ಲ ಇಂತವರೇ... ಲೇ ತೊಗೊಳೋ ದೋಸೆ... ಆದ್ರೆ ಮೊದ್ಲು ಕೈ ತೊಳ್ಕೊಳೋ... ಗಲೀಜ್ನನ್ನ ಮಗನೆ..."ಎಂದ

ಹೇಳಿದ್ದೆ ತಡ ಬಾಟಲಿ ಇಂದ ನೀರು ಸುರಿದು ಕೈ ತೊಳೆದು, ಮಧು ಕೈಲಿದ್ದ ಪ್ಯಾಕೆಟ್ ಕಿತ್ತುಕೊಂಡು ದೋಸೆ ತಿನ್ನಲಾರಂಮಭಿಸಿದ.

ಅವನು ಯಾಕೆ ಹಿಂಗೆ ಬರ್ಗೆಟ್ಟು ತಿನ್ತಾವ್ನೆ... ಏನು ಇವನ ಕಥೆ ಕೇಳ್ಬೇಕು ಅನಿಸಿತು ಮಧುಗೆ.
"ಲೋ.. ಅಪ್ಪ.. ತಂದೆ.. ಏನೋ ನಿನ್ನ ಹೆಸರು..."

"ನಾನು ಕೆಸವ..."

"ಕೇಶವನೆನ್ಲಾ.. ಸರಿಯಾಗಿ ಹೇಳೋ ಹೆಸರನ್ನ.. ನನ್ನ ಹೆಸರು ಮಧು... Mr. ಮಧುಕುಮಾರ್.. Son of ಪ್ರಜಾಪತಿ."

ಆ ಹುಡುಗ ಇವನ ಯಾವ ಮಾತು ಕೇಳುತ್ತಿರಲಿಲ್ಲ.. ಅವನಿಗೆ ಬೇಡದ ಮಾಹಿತಿ..

"ಸರಿ ನಿಮ್ಮ ಮನೆ ಅದೇ ತಾನೇ.."ಎಂದು ಕೈ ತೋರಿಸಿದ ಮೂಲೆ ಮನೆಯ ಕಡೆಗೆ.

"ಹ್ಞೂ.. ನಾನು ಹೋಗಲ್ಲ ಹೋಗಲ್ಲ..." ಅಂತ ಬೆಂಚಿನಿಂದ ಎದ್ದು ಹೋಗಲು ಪ್ರಯತ್ನ ಪಟ್ಟ.

"ಲೇ ಇರೋ ಇರೋ.. ಹೋಗು ಅಂತ ಎಲ್ಲಿ ಹೇಳಿದೆ. ಊಟ ಮಾಡು... ತೊಗೊ ನೀರು ಕುಡಿ" ಎಂದ ಮಧು.

"ಅಲ್ಲಿ ಹೊಡೀತಾರೆ.. ನೀನು ಹೋಗ್ಬೇಡ..."ಎಂದ

"ಯಾರು ಹೊಡೀತಾರೆ...?"

"ಎಲ್ಲಾರು... ಅಮ್ಮನು ಹೊಡೆದಳು..."
ಅವನ ಪಾಪದ ಮುಖ ನೋಡಿ ಅಯ್ಯೋ ಅನಿಸಿತು.

"ನಿನ್ನ ಹೆಸರು ಏನಂದೆ, Mr. Madhu kumar son of prajapati...ha ha ha..Prajapati... Prajapati..., ನನ್ನ ಅಪ್ಪನ ಹೆಸರು ವಿಷ್ಣುಮೂರ್ತಿ.. ಅವ್ರಿಲ್ಲ., ನಮ್ಮನೆಲ್ಲ ಬಿಟ್ಟು ದೂರ ಹೋದ್ರು"

ಮಧುವಿಗೆ ನೆನಪಾಯಿತು, ಹೋದವಾರ ಆ ಮನೆಯ ಮುಂದೆ ಬೆಂಕಿ ಹಾಕಿದ್ದರು. ಸ್ವಲ್ಪ ಸಮಯದ ನಂತರ ಶಾಮಿಯಾನ ಹಾಕಿಸಿದ್ರು. ಯಾರೋ ವೈಕುಂಠ ಸೇರಿರಬೇಕು ಅಂತ ಗೊತ್ತಾಗಿ. ಅವತ್ತು ಮನೆಗೆ ಬೇಗ ಹೋಗಿದ್ದ ಮಧು. ಅದು ಇವನ ತಂದೆ ಅಂತ ಇವಾಗ ಅರಿವಾಯಿತು.

ಕೆಲವೊಮ್ಮೆ ನಾವು ಪ್ರಕ್ಷಕರು ಮಾತ್ರವಾಗಿರುತ್ತೇವೆ. ಕೆಲ ಘಟನೆಗಳು ನಮ್ಮ ಮುಂದೆ ಯಾಕೆ ನೆಡಿಯುತ್ತೆ ಅನ್ನೋದಕ್ಕೆ ನಿರ್ದಿಷ್ಟ ಉತ್ತರ ನಮಗೆ ಆ ಹೊತ್ತಲ್ಲಿ ಸಿಗದಿದ್ದರೂ ಮುಂದೊಂದು ದಿನಾ ಹಳೆಯ ಘಟನೆಗಳನ್ನು ನೆನಪಿಸಿಕೊಂಡು ಪೋಣಿಸಿ ನೋಡಿದಾಗ ಎಲ್ಲಾ ಸ್ಪಷ್ಟವಾಗುತ್ತದೆ.

ಕೇಶವ :"ಅಪ್ಪ ಹೋದ್ಮೇಲೆ.. ಅಣ್ಣಾ ಅತ್ತಿಗೆ ಇಬ್ಬರು ನನ್ನ ಅಮ್ಮನ ಬೈತಾರೆ, ನನ್ನ ಹೊಡೀತಾರೆ. ಊಟ ಕೊಟ್ಟಿಲ್ಲ ಗೊತ್ತಾ..."
(ಸ್ವಲ್ಪ ಮೌನ)
"ಎರಡು ದಿನವಾಯಿತು ಅಮ್ಮ ನನ್ನ ಮಾತಾಡಿಸೋಕು ನನ್ನ ರೂಮಿಗೆ ಬರಲಿಲ್ಲ..."

ಮಧು : "ಮತ್ತೆ.. ಅಮ್ಮ ಹೊಡೆದರು ಅಂತ ಹೇಳಿದೆ..."

ಕೇಶವ: "ಅದು ಅವತ್ತು ನಾನು ಊಟ ಬೇಕು ಅಂತ ಅಂದೆ. ಆಮೇಲೆ ಅಮ್ಮ ಎಲ್ಲು ಕಾಣಲಿಲ್ಲ.."
(ಸ್ವಲ್ಪ ಮೌನ )
"ನೀನು ಏನಾದ್ರು ನೋಡಿದ್ಯಾ ಅಮ್ಮನ..please ಹೇಳೋ.."

ಮಧು: "... ಹ್ಮ್ಮ್ಮ್.."

ಇವನ ಮುಖ ನೆನಪಿದೆ, ಯಾಕಂದ್ರೆ ಇವನು ಬುದ್ದಿಮಾಂದ್ಯಾ. ರಸ್ತೆಯಲ್ಲಿ ಇವನು ಹೋದಾಗಲೆಲ್ಲ ನೋಡಿ ಕಿಸಕ್ಕನೆ ನಕ್ಕಿರುವುದು ಹೌದು. ಅವನ ಅಸಹಾಯಕತೆ ನಮಗೆ ಮೋಜು, ನಾವೆಲ್ಲ ಅಷ್ಟೇ ಅಲ್ವಾ ನ್ಯೂನ್ಯತೆ ಕಂಡ್ರೆ ಕೇಕ್ಕರಿಸಿ ನೋಡೋದು, ಅದರ ಬಗ್ಗೆ ಮಾತಾಡಿ ನೋಯಿಸುವುದು ನಮ್ಗೆಲ್ಲಾ ಅದು ಸ್ವಯಾರ್ಜಿತವಾಗಿ ಸಂಪಾದಿಸಿದ ಕೆಟ್ಟಬುದ್ದಿ.

ಅವನ ಅಮ್ಮ, ನೆನಪಾಗುತ್ತಿಲ್ಲ.., ಕೈ ಹಿಡಿದು ಹೋಗುತ್ತಿದ್ದ. ಅಷ್ಟು ಮಾತ್ರ ಸ್ಮರಿಸಿಕೊಂಡ ಮಧು.

ಆ ಕೈ, ಅವರ ಮುಖ ಸ್ಪಷ್ಟತೆ ಇಲ್ಲಾ...

ಕೇಶವ: "ಅಮ್ಮ ಕಾಣ್ತಿಲ್ಲ ಅಂತ ಅಣ್ಣನ ಕೇಳಿದಕ್ಕೆ, ನನ್ನ ಚೆನ್ನಾಗಿ ಹೊಡೆದು ಮನೆಯಿಂದ ಹೊರಗೆ ಹಾಕಿ ಬಾಗಿಲು ಹಾಕಿಕೊಂಡ.. ಅಮ್ಮ ಎಲ್ಲಿ ಹೋದ್ರು "

ಮಧು: "ಅಮ್ಮ ಎಲ್ಲಿ ಹೋದ್ರು"?


****** will be continued********

Comments

Popular posts from this blog

ಕಾಗದದ ದೋಣಿ ⛵️

No pictures, but memories for lifetime

ನಮ್ಮ ಊರಿನಲ್ಲಿ ಶೂಟಿಂಗ್ - ೧