ಎಲ್ರು ಕಾಲ್ ಎಳಿತದೇ ಕಾಲ
"ಅದೇನೋs ಅಂತರೆಲ್ಲ..ಅಪ್ಪ ಹಾಕಿದ್ ಆಲದ ಮರಕ್ಕೆ......,
ಸುಣ್ಣ ತತ್ತರೇ ನಿಂಗಿ....
ಅಂತ ಸೊಂಟಕ್ಕೆ ಸಿಕ್ಕಿಸಿದ್ದ ಬಟ್ಟೆಚೀಲದಿಂದ ಡೊಂಕಪಂಕವಾಗಿ ಮಡಿಸಿದ್ದ ಒಂದು ಅರೆ ಒಣಗಿದ್ದ ವೀಳ್ಯದೆಲೆ ತೆಗೆದು, ರವಷ್ಟು ಬೆರೆಳಿಂದ ಚೀಲದ ಅಡಿಯಲ್ಲಿದ್ದ ಅಡಿಕೆ ಪುಡಿ ಬಾಚಿಕೊಂಡು ದವಡೆಗೆ ಉಂಡೆ ಮಾಡಿ ಸೇರಿಸಿ.. ನಿಂಗವ್ವ ಶಾಮ್ಮಣ್ಣರ ಹಳೇ ಪೆಟ್ಟಿ ಅಂಗಡಿಯ ಮುಂದೆ ಇದ್ದ ಕಂಬಕ್ಕೆ ಒರಗಿ ಕುಳಿತು,ಕಾಲು ಚಾಚುತ್ತಾ ಗುನುಗಿದಳು ಕೆಂಪಮ್ಮ.
ಹಳೇ ಪೆಟ್ಟಿ ಅಂಗಡಿಯ ಮರದ ನೆಲಹಾಸು ನುಣ್ಣಗೆ ಆಗಿದ್ದವು. ಅಲ್ಲಲ್ಲಿ ಮೊಳೆಗಳು ಎದಿದ್ದವು. ಹೋದ ಯುಗಾದಿಗೆ ಕಟ್ಟಿದ್ದ ಮಾವಿನ ತೋರಣ ಒಣಗಿ ಹೋಗಿತ್ತು. ಮೂಲೆಯಲ್ಲಿ ಮಾದಪ್ಪನ ಮುಂದೆ ಹೊತ್ತಿಸಿದ್ದ ಧೂಪ ಇನ್ನು ಗಂಧಸೂಸುತಿತ್ತು.
ಬಾಟಲುಗಳಲ್ಲಿ ಅರ್ಧ ತುಂಬಿದ್ದ ನಿಂಬೆಹುಳಿ, ಮಿಠಾಯಿ ಎಲ್ಲವೂ ಕುಂತಲ್ಲೇ ಕೂತು ಸಪ್ಪೆಯಾಗಿದ್ದವು.
ಕಡ್ಡಿಪುಡಿ, ಬೀಡಿ, ಬೆಂಕಿ ಪೊಟ್ಟಣ, ಸಿಗರೇಟ್ ಪೊಟ್ಟಣಗಳು, ಬಿಸ್ಕತ್ತು, ಚಿಪ್ಸ್ ಪಾಕಿಟ್ಟು, ಸೋಡಾ ಬಾಟ್ಲಿ, ಪೆಪ್ಸಿ ಹಿಂಗೆ ಹಲವಾರು ವಸ್ತುಗಳಿಂದ ತುಂಬಿತ್ತು ಆ ಪೆಟ್ಟಿ ಅಂಗಡಿ.,
ದಿನಾ ಯಾಪಾರ ಮಾಡುತ್ತ, ಕಾಲಕ್ಕೆ ತಕಂತೆ ವಸ್ತುಗಳ ಬದಲಿಸಿ ಇಂದಿಗೂ ಪೆಟ್ಟಿ ಅಂಗಡಿಯಿಂದ ಸಂಪಾದನೆ ಮಾಡುವುದು ಕಷ್ಟದ ಮಾತು. ನಿಂಗವ್ವ ಶಾಮಣ್ಣ ಇಬ್ಬರು ಇಂದಿಗೂ ಪೇಟೆಗೆ (ಬೆಂಗಳೂರು ಮಾರ್ಕೆಟ್ ) ಹೋಗಿ ಸಾಮಾನು ತಂದು, ಯಾಪಾರ ಮಾಡಿ ಜೀವನ ಮಾಡ್ತಾ ಅವ್ರೆ. ಊರು ಜೀವನಕ್ಕೆ ದಾರಿ ಮಾಡ್ತದೆ. ಇವಗಂತೂ ಕೇರಳದ ಹುಡುಗ್ರು ಬಂದು ಇಲ್ಲಿ ದಿನಸಿ ಮಾರಿ ದುಡ್ಡು ಸಂಪಾದನೆ ಮಾಡ್ತಾವರೆ. ಊರು ಯಾವುದಾದರೇನು, ಇಲ್ಲೇ ಇರ್ಬೇಕು, ಇಲ್ಲೇ ಬದುಕಬೇಕು ಅನ್ನೋ ಛಲ ಇರ್ಬೇಕು. ಅವಾಗ ಊರು ನಮ್ಮ ಅವಶ್ಯಕತೆಗೆ, ಓ ಗೊಟ್ಟು ನಮ್ಮನ್ನ ಸಾಕ್ತದೆ. ಇಲ್ಲಾಂದ್ರೆ ಮುಟ್ ಬಂದಿರೋ ಹೆಂಗಸಿನ ಹಂಗೆ ಊರಿಂದಾಚೆ ಮಡಗಿರ್ತದೆ.
ಇಂದಿಗೂ ಬೆಂಕಿ ಪೊಟ್ಟಣ ಖಾಲಿ ಆದರೆ ನಿಂಗವ್ವನ ಅಂಗಡಿಲಿ ತತ್ತ ಅಂತಾನೆ ಹೇಳೋದು ಊರಲ್ಲಿ. ಅಷ್ಟರ ಮಟ್ಟಿಗೆ ಊರಿಗೆ ಒಂದು ಅಂಗಡಿ, ಅಂಗಡಿಗೆ ಊರಿನವರ ಬೆಸುಗೆ.
ಇದೆಲ್ಲಾ ಯಾಕೆ ಯೋಳ್ದೆ ಅಂಕಂಡ್ರಾ,, ನಮ್ಮೂರ್ನಾಗೆ ಈವಾಗ ಯಾರ್ಯಾರ್ದೋ ಹಾವಳಿ ಶುರುವಾಗದೆ. ಬೇಜಾರ್ ಆಯ್ತದೆ ನೋಡೋಕೆ. ಇದೇ ಹಳ್ಳಿಲಿ ತಾತ ಮುತ್ತಾತನ ಕಾಲದಿಂದಲೂ ಇದ್ದು, ಓದಿ ಬೆಳ್ದು ದೊಡ್ಡವರಾದೊ, ಆದ್ರೆ ಹೇಳ್ಕೊಳಕ್ಕೆ ಸರಿಯಾದ ಸೂರಿಲ್ಲ. ನಮ್ದು ಅನ್ನಕ್ಕೆ ಜಮೀನಿಲ್ಲ. ಈವಾಗ ನೋಡಿದ್ರೆ ನಮ್ಮ ಪಾಪಿಪರದೇಶಿ ಜಾಗಕ್ಕೆ, ಜಾನುವಾರು ಮೇಯೋಕೆ ಬಿಟ್ಟ ಜಾಗಕ್ಕೆಲ್ಲಾ ದುಡ್ಡು ಕೊಟ್ಟು ಕೊಂಡಕೊಂಡು ಉದ್ದುದ್ದ ಮಹಡಿ ಕಟ್ಟಿ ಜಬ್ರ ಮಾಡತಾವ್ರೆ, ಎಲ್ಲಿಂದ ಬಂದವೋ ಇವೆಲ್ಲಾ ನಾ ಬೇರೆ ಕಾಣೆ. ನೆಟ್ಟುಗೆ ಕಕ್ಕಸ್ಸು ತೊಳಿಯಕ್ಕೆ ಬರಲ್ದು. ಇವರ ಮಕ್ಕೆ ನಾಜೂಕು ನೆಲ ಬೇರೆ ಕೇಡು.
ಮುಖ ಸಿಂಡರಿಸಿಕೊಂಡು ಎಲೆ ಜಗಿತಾ ಮನಸಲ್ಲಿ ಆ ಅಪಾರ್ಟ್ಮೆಂಟ್ ಹೆಂಗಸಿನ ಒಪ್ಪುಓರಣವಿಲ್ಲದ ಮನೆ ಕಂಡು ಬೇಸತ್ತ ಕೆಂಪಮ್ಮನ ಗೊಣಗಾಟವ ನೋಡಿ ನಿಂಗವ್ವ.
"ಅದ್ಯಾಕೆ ಹಿಂಗೆ ಮಕಮಾಡಿದ್ಯ ಏನ್ ಅಯ್ತು, ನಾಷ್ಟಾ ತಿಂದಾs ಇಲ್ವಾ. ಮೈಗೆ ಹುಷಾರಿಲ್ವಾ... ಮಾತ್ರೆ ಬೇಕಿತ್ತಾ ಕೆಂಪಮ್ಮ.." ಎಂದಳು
ಬಾಯಲ್ಲಿ ಇದ್ದ ಎಲೆಯ ಉಳಿಕೆ ಕ್ಯಾಕರಿಸಿ ರಸ್ತೆಗೆ ಉಗಿದು, ಸೀರೆಯಿಂದ ತುಟಿ ಒರೆಸಿ.. ನಿಂಗವ್ವನ ನೋಡಿ.. "ನೀರು ತತ್ತ" ಎಂದಳು
"ಎಲೆ ಅಡಿಕೆ ತಿಂದು ನೀರು ಕುಡಿತಾರsss.... ವಸಿ ತಾಳು, ಆಮೇಲೆ ಎದೆ ಹಿಡ್ಕೊಂಡಾತು.."
"ಏನಾಗಲ್ಲ ತಕಂಬಾರೆ, ಮಿಳ್ಳೆ ತುಂಬಾ ತತ್ತ..."ಎಂದು ಹೇಳಿ.. ಮತ್ತೆ ಬಾಯಲ್ಲಿ ಇದ್ದ ಅವಶೇಷವೆಲ್ಲಾ ರಸ್ತೆಗೆ ಕ್ಯಾಕರಿಸಿದಳು ಕೆಂಪಮ್ಮ.
"ತಕ್ಕ.." ಎಂದು ಒಂದು ಮಿಳ್ಳೆ ತುಂಬಾ ನೀರು ಕೊಟ್ಟಳು ನಿಂಗವ್ವ.
ಒಂದು ಗುಟುಕು ನೀರು ಬಾಯಿಗೆ ಹಾಕಿ ಮುಕ್ಕಳಿಸಿ ಮತ್ತೆ ರಸ್ತೆಗೆ ಕೆಂಪ್ನೀರು ಸಿಂಪಡಿಸಿದಳು ಕೆಂಪಿ. ಆಮೇಲೆ ಅಷ್ಟೂ ನೀರು ಕುಡಿದು.. ಸೀರೆಯಿಂದ ಮೂತಿವರೆಸಿ ನಿಟ್ಟುಸಿರು ಬಿಟ್ಟಳು.
ಇದೆಲ್ಲಾ ನೋಡುತಿದ್ದ ನಿಂಗವ್ವಗೆ ಏನು ಅರ್ಥ್ ಆಗಿಲ್ಲ. ಸುಮ್ನೆ ನೋಡ್ತ ನಿಂತ್ಕೊಂಡಳು.
"ಅಲ್ಲಾ ಆ ಬ್ಯಾವರ್ಸಿಗಳಿಗೆ ಮನೆ ಒಪ್ಪ ಮಾಡೋಕೆ ಬರಲ್ವಾ."
"ಏನ ಅಯ್ತು ಕೆಂಪಿ, ಯಾಕೆ ಹಿಂಗೆ ಮಾತಾಡ್ತಿದ್ಯ ಇವತ್ತು... ಕೆಲ್ಸ ಏನ್ ಹೊಸದೆ ನಿಂಗೆ... ಎಟ್ ವರ್ಸ್ದಿಂದ ಮಾಡಿದ್ಯೇ..."
"ಯಾಕೋ ಸಾಕಾಗದೆ ಕಣೇ ನಿಂಗಿ... ಆ ಗಲೀಜು ಬಚ್ಚಲು ಮನೆ, ಅವರ ಮೈಲಿಗೆ ಬಟ್ಟೆ.. ಇವ್ಯಾವು ಮಾಡಲ್ಲ ಇನ್ಮೇಕೆ.. ಹೊಲಕ್ಕೆ ಹೊಯ್ತೀನಿ ಕೆಲ್ಸುಲ್ಕೆ.."
"ಈ ವಯಸ್ಸಲ್ಲಿ ಬಿಸಿಲಿನಲ್ಲಿ ಮೈ ಬಗ್ಗಸಿ ಅಷ್ಟೋತ್ತು ಕೆಲ್ಸ ಮಾಡಕ್ಕೆ ಅಯ್ತದ...ಅದು ಇರ್ಲಿ ಇವಾಗ ಯಾರು ತಾನೆ ಒಕ್ಕಲುತನ ಮಾಡ್ತಾವ್ರೆ ನಮ್ಮ ಹಳ್ಳಿಲಿ. ನಿಂಗು ಏನು ವಯಸ್ಸು ಕಮ್ಮಿ ಆಗದ? ಏನೋ ಒಂದ್ ಒಂದು ದಿನಾ ಕೆಲ್ಸ ಬ್ಯಾಸರ ಆಯ್ತದೆ, ಅಷ್ಟ್ಕ್ಕೆ ಬಿಟ್ಟೆ ಬಿಡ್ತಿನಿ ಅಂದ್ರೆ ಹೆಂಗೆ..."
"ನಾನು ಮಾಡಲ್ವೆ.. ಈವತ್ತೇ ಕೊನೆ ಆ ಅಪಾರ್ಟ್ಮೆಂಟ್ ಕಡಿಕ್ಕೆ ತಲೆ ಹಾಕಿನೂ ಮಲ್ಗಲ್ಲ.. ಮಾದಪ್ಪನ ಆಣೆಗೂ..."
ಅಷ್ಟ್ರಲ್ಲಿ ಒಳಗಿಂದ ಒಂದು ದನಿ ಬಂತು.
"ಓ.. ಬಾರ ತಾಯಿ ಯಾಕೋ ಕೂಗಡ್ತಾ ಇದ್ಯಾ.. ಉಂಡುಕೊಂಡ್ ಹೋಗಿವಂತೆ..." ಅಂದ ಶ್ಯಾಮಣ್ಣ
"ಬ್ಯಾಡ ಮನೆಗೆ ಹೋಗಿ ಮುದ್ದೆ ಮಾಡ್ಕಂತಿನಿ.. ಬತ್ತೀನಿ.."
"ಯೇ ಬವ್ವೋವ್, ಜೊತೆಗೆ ತಿನ್ನಿಯ.. ಮನೆಗೆ ಹೋಗಿ ಮಲಿಕ್ಕೊ.., ಹೋಗೆ ನಿಂಗಿ ತಟ್ಟೆಲಿ ಊಟ ಬಡಿಸ್ಕೊಂಡ್ ಬಾವೊಗು.. ಅಂದ ಶ್ಯಾಮಣ್ಣ.
ಯಾಕೋ ಮೂಗು ಎಲ್ಲಾ ಮುರೀತಾ.. ಬ್ಯಾಡ ಶ್ಯಾಮಣ್ಣ.. ಮನೆಗೆ ಹೋಗಿ ಸ್ನಾನ ಮಾಡಿ ಅಮೇಕೇ ಊಟ ಮಾಡ್ತಿನಿ. ಬತ್ತಿನಪ್ಪೋ.. ಎಂದು ಎದ್ದು ಬಿರ್ಬಿರ್ನೆ ಹೊಂಟಲು ಕೆಂಪಿ...
"ಯಾಕೆ ಏನ್ ಅಯ್ತು.. ಬೇಸರ ಮಾಡ್ಕೊಂಡು ಹೋಗ್ಬಿಟ್ಲು ಕೆಂಪವ್ವ..." ಎಂದ ಶ್ಯಾಮಣ್ಣ.
ಹಳೇ ಖಾಕಿ ಬಣ್ಣದ ಸ್ವೆಟರ್, ಅಲ್ಲಲಿ ತೂತು ಬಂದು ಗಾಳಿ ಆಡುತಿತ್ತು. ತಲೆಗೆ ಮಂಕಿ ಕ್ಯಾಪ್, ಮುಖ ಗವಚು ಮಡಚಿ ಹಾಕೊಂಡಿದ್ದ ಶ್ಯಾಮಣ್ಣನಿಗೆ, ನಿಂಗಿ ಬಿಸಿ ಮುದ್ದೆ ಉಪ್ಪಸಾರು ಇದ್ದ ತಟ್ಟೆ ತಂದು ಕೈಗೆ ಕೊಟ್ಟಳು.
ಕೆಂಪಿ ಹೋಗೋದನ್ನ ಗಂಡ ಹೆಂಡತಿ ಇಬ್ಬರು ಸುಮ್ಮನೆ ನೋಡುತ್ತಾ ಕುಂತರು.
ಬೆಂಗಳೂರಿನ ಜನ ಜಂಗುಳಿಯಿಂದ 30 km ದೂರದ ಒಂದು ಸಣ್ಣ ಊರು. ಮಾಚೇಗೌಡನ ಪಾಳ್ಯ. ಸುತ್ತಲೂ ಹಸಿರು, ಕೆರೆ ವೆಂಕಪ್ಪನ ಗುಡಿ,ಮಾರಮ್ಮ, ಹನುಮಂತಪ್ಪ. ಸಾಬ್ರುಗೋಳು ನಮಾಜ್ ಮಾಡೋ ಜಾಗ. ಕುರಿ ಮೇಸೋರು, ಧನ ಕಾಯೋರು, ಆಫೀಸಿಗೆ ಬಸ್ ಹತ್ತಿ ಬೆಂಗಳೂರಿಗೆ ಅಪ್ and ಡೌನ್ ಮಾಡೋರು, ಸ್ಕೂಲ್ ಮಕ್ಳು, ಖೋಡೆ ಫ್ಯಾಕ್ಟರಿಗೆ ಕೆಲ್ಸಕ್ಕೆ ಹೋಗೋ ಐಕ್ಳುಗೋಳು.. ಇಷ್ಟೇ ನಮ್ಮ ಊರಿನ ಜನರ ಪರಿಚಯ.
ಏನೋ ಹೇಳೋಕೆ ಏನ್ ಏನೋ ಹೇಳ್ತಾ ಇವ್ನಿ ಕ್ಷಮಿಸಿ, ಕೆಂಪಿ ವಿಷ್ಯ ಮಾತಾಡಣ. ಕೆಂಪಮ್ಮನ ವಿಸ್ಯ ವಸಿಯೋಳ್ತೀನಿ ಕೇಳಿ, ಕೆಂಪಮ್ಮನಿಗೆ 64 ವರ್ಷ ಮೊನ್ನೆ ಮಾರ್ನೆಮಿ ಹಬ್ಬಕೆ ತುಂಬಿದ್ದು. ಮೊಣಕಾಲು ಸ್ವಲ್ಪ ನೋವ್ವು ಅನ್ನೋದು ಬಿಟ್ರೆ ಅಂತ ಕಾಯಿಲೆ ಕಸಾಲೆ ಎಂತದ್ದು ಇಲ್ಲಾ.
ಆರು ವರ್ಷದ ಹುಡುಗಿನ, ಮನೆ ಕೆಲ್ಸಕ್ಕೆ ತಾಥಗುಣಿಯಿಂದ ಕರ್ಕೊಂಡ್ ಬಂದಿದ್ದು ಮುನೇಗೌಡ್ರು. ಅವಾಗ ಅವ್ರಿಗೆ ಇಬ್ಬರು ಗಂಡು ಮಕ್ಕಳು ಇದ್ರು,ಸೀತಾರಾಮ ಮತ್ತೆ ನಾರಾಯಣ.
ಒಬ್ಬ ನಾಲ್ಕು , ಇನ್ನೊಬ್ಬ ಹದಿಮೂರು ವರ್ಷ ವಯಸ್ಸು.
ತಾರಕ್ಕನಿಗೆ ಮೂರನೇ ಹೆರಿಗೆ ಹೊತ್ತಿಗೆ ಅವರ ಮನೆ ಕಡೆ ಸಂಬಂಧ ಕಳಚಿ ಯಾರು ಬಾಣಂತಿನ ನೋಡ್ಕೊಳೋಕೆ ಇಲ್ದೇ ಇದ್ದಾಗ. ಈ ಪುಟ್ಟ ಹುಡುಗಿನ ಕರ್ಕೊಂಡು ಬಂದಿದ್ದು.
ಆರು ವರ್ಷದ ಹುಡುಗಿ ಏನ್ ಕೆಲ್ಸ ಮಾಡೋಕೆ ಆಯ್ತದೆ ಅಂತ ಮುನೇಗೌಡ್ರ ದೊಡ್ಡ ಅತ್ತಿಗೆ ಕಮಲಮ್ಮ ಉದ್ಘಾರ ಮಾಡಿದ್ರು.
ಮೊದ್ಲು ಬಂದಾಗ ಅಳು, ಕೂಗು ಎಲ್ಲಾ ಪಕ್ಕದ ಮನೆಗಳಿಗೆ ಕೇಳಿ ಬಂದಿದ್ದು ಉಂಟು. ಕಾಲ ಕ್ರಮೇಣ ಆ ಮಗಿ ಆ ಮನೆಗೆ ಎಷ್ಟು ಒಗ್ಗಿ ಹೋದಳು ಅಂದ್ರೆ, ಅವರ ಮನೆ ಮಗಳೇ ಆದಳು.
ಮುನೇಗೌಡ್ರು ಒಳ್ಳೆ ಒಕ್ಕುಲುತನ ಮಾಡ್ತಿದ್ರು. ಅಸ್ತಿ ಎಲ್ಲಾ ಜೋರಾಗೆ ಇತ್ತು. ಮಕ್ಕಳನ್ನ ಓದಿಸಬೇಕು ಅಂತ ಶತಾಯ ಗತಾಯ ಪ್ರಯತ್ನ ಪಟ್ಟು ಬೆಂಗಳೂರು law ಕಾಲೇಜಿಗೆ ಸೀತಾರಾಮನ ಸೇರಿಸಿದರು. ಮೂರನೇದು ಹೆಣ್ಣು ಮಗು ಶಾರದ.
ಕೆಂಪಿ ಮೂರು ಹೊತ್ತು ಆ ಶಾರದಳನ್ನು ಕಂಕುಳಲ್ಲೇ ಹಾಕೊಂಡು ಇರೋಳು.
ಚೆನ್ನಾಗೆ ಇದ್ದೋ ಎಲ್ರು, ಊರಿಂದ ಬೆಂಗಳೂರಿಗೆ ಕೆಲ್ಸಕ್ಕೆ ಹೋಗೋರು ಸಂಜೆ ಮೇಲೆ ಮನೆಗೆ ಬರೋದು ಕಾಲಕ್ರಮೇಣ ತಡವಾಗೋಕೆ ಶುರು ಅಯ್ತು. ಗಾಡಿಗುಳು ಜಾಸ್ತಿ ಆದ್ವು. ಎಲ್ಲಾ ಬದ್ಲಾಗ ತೊಡಗಿತು.
ಕೆಂಪಿ, ವಯಸ್ಸಿಗೆ ಬಂದಾಗ ಮುನೇಗೌಡ್ರು ಅವರ ತೋಟದ ಆಳು ಅಂಜನಪ್ಪನ ಜೊತೆ ಅವಳ ಲಗ್ನ ಮಾಡಿದ್ರು. ಅವರಿಬ್ಬರು ಗೌಡ್ರು ಹೊಲ ಮನೆ ಎರಡು ಕಡೆ ದುಡಿಯೋರು.
ಗೌಡ್ರು ಮಕ್ಕಳು ಬೆಳೆದು ದೊಡ್ಡವರಾಗಿ ಪಟ್ಟಣ ಸೇರ್ಕೊಂಡ್ರು.
ಗೌಡ್ರು ಮಗಳ ಮದುವೆ ಹೊಸಕೋಟೆಯ ಚೆನ್ನಪ್ಪ ಗೌಡ್ರ ಮಗನ ಜೊತೆ ನಿಶ್ಚಯ ಮಾಡಿದ್ರು.
ಈ ಎಲ್ಲಾ ಸಂಭ್ರಮದಲ್ಲಿ ಎಲ್ಲಾ ಕೆಲಸ ಮಾಡಿದ್ದು ಕೆಂಪಿ ಮತ್ತೆ ಅಂಜನಪ್ಪ.
ಗೌಡ್ರು ತಮ್ಮ ಜೀವನಕ್ಕೆ ದಾರಿ ಮಾಡ್ತಾರೆ ಅಂತಾನೋ, ಅವರ ಮೇಲೆ ಇದ್ದ ಪಿರೂತಿನೋ, ಅಭಿಮಾನವೋ ಏನೋ, ಜೀತದ ಆಳಿಗಿಂತ ಜಾಸ್ತಿ ದುಡಿದ್ದಿದ್ದು ಕೆಂಪಿ.
ತಾರಕ್ಕ ಹಾಸಿಗೆ ಹಿಡಿದಾಗ, ಶಾರದ ಬಸಿರಾದಾಗ, ಗೌಡ್ರ ತಾಯಿ ಹಾಸಿಗೆ ಹಿಡಿದಾಗ.. ಎಲ್ಲಾ ಕಾಲದಲ್ಲೂ ಜೊತೆಗೆ ಇದ್ದದ್ದು ಕೆಂಪಿ.
ಕೆಂಪಿಗೆ ಒಬ್ಬ ಮಗ ಇದ್ದ,ಮಹದೇವು. ಓದಿನಲ್ಲಿ ಮುಂದು, ಆದ್ರೆ ಸ್ವಲ್ಪ ಹೋರಾಟದ ಗೀಳು ತಲೆಗೆ ಹತ್ತಿತ್ತು. ನ್ಯಾಯ ಕೊಡಿಸ್ತೀನಿ ಅಂತ ಹೋರಾಟ ಮಾಡ್ತಿದ್ದ. ಇವನ ಮಾತು ಕೇಳಿ, ಧಣಿಗಳ ವಿರುದ್ಧ ಹೋದೋರೆಲ್ಲ ಇವತ್ತು ಹಿಡಿ ಹಿಡಿ ಶಾಪ ಹಾಕೊರು ಒಂದು ಅಷ್ಟು ಮಂದಿ, ಇನ್ನೊಂದಷ್ಟು ಮಂದಿ ಮಹದೇವು ಮಾತೇ ವೇದವಾಕ್ಯ ಅನ್ನೋರು ಬೇರೆ.
ಇವೆರಡಕ್ಕೆ ಸೇರದ ಇನ್ನೊಂದು ಗುಂಪು, ಮಹದೇವು ತಲೆ ಸರಿ ಇಲ್ಲಾ ಅಂತ ನಂಬಿತ್ತು. ಚಿಕ್ಕವಯಸ್ಸಿನಲ್ಲಿ ತೆಂಗಿನಕಾಯಿ ತಲೆ ಮೇಲೆ ಬಿದ್ದು ಹೆಂಗಹೇಗೋ ಆಡತಾನೆ ಅಂತ ಅವರ ವಾದ.
ಯಾರು ಏನಂದ್ರೆನ ಹೆತ್ತ ಅಮ್ಮನಿಗೆ ಹೆಗ್ಗಣ ಮುದ್ದು ಅಂದಂಗೆ, ಕೆಂಪಮ್ಮ ಮಾತ್ರ ಮಗನ ಮೇಲೆ ತುಂಬಾ ಪಿರುತಿ. ಮಗನಿಗೆ ಒಂದು ಜಾಗ ಕೊಟ್ರೆ, ಮನೆ ಕಟ್ಟಿಸಿಕೊಂಡು ಹೆಂಗಾರ ಜೀವ್ನ ಮಾಡ್ತಾನೆ ಅಂತ ಜೀತದ ಆಳಿನ ಹಾಗೆ ಗೌಡ್ರು ಮನೆಗೆ ಸೇವೆ ಮಾಡ್ತಿದ್ಲು.
ಗದ್ದೆಗೆ ಹೋಗೋ ದಾರಿಲಿ ಕಾಲು ಎಕ್ಕರೆ ಜಾಗ, ಗೌಡ್ರಿಗೆ ಸೇರಿದ ಜಾಗ, ಜಾಲಿ ಗಿಡದಿಂದ ತುಂಬಿದ್ದ ಜಾಗದ ಮೇಲೆ ಅಂಜನಪ್ಪನಿಗೆ ಆಸೆ. ಅಲ್ಲಿ ಒಂದು ಮನೆ ಕಟ್ಟಿ, ಕೈತೋಟ ಮಾಡಿ. ಸೊಪ್ಪು ತರಕಾರಿ ಬೆಳೆದು, ಹಸು ಕರು ಕಟ್ಟಿ ಕೊನೇಗಾಲದಲ್ಲಿ ಸ್ವಚ್ಛಂದವಾಗಿ ಇರಬೇಕು ಅಂತ.
ಮನುಷ್ಯ ಅಂದಮೇಲೆ ಆಸೆ ಇರೋಲ್ವೆ, ನೀವೇ ಯೋಳಿ.., ಇದು ಸ್ವಲ್ಪ ಜಾಸ್ತಿ ಅನಿಸಬಹುದು. ಆದ್ರೆ ಆಸೆಗೆ ಮಿತಿ ಇರ್ತದ..
ಆಳು... ಆಳಿಗೆ ಆಸೆ.. ಮನೆ ಕಟ್ಟೋ ಆಸೆ ಇರಬಾರದೇ...ಮನೆ ಮಕ್ಕಳಿಗಿಂತ ಮನೆಕೆಲಸ ಮಾಡೋ ಆಳು.. ಸುಖ ದುಃಖ ಎರಡರಲ್ಲೂ ದಣಿವರಿಯದೇ ದುಡಿದ ಆಳು.., ಕೊಡೊ ಕಿಲುಬು ಕಾಸು ಆ ಕೆಲ್ಸಕ್ಕೆ ಸಂದ ಅವಮಾನವಷ್ಟೇ... ಅಕ್ಷರಗಳಲ್ಲಿ ಹೇಸಿಗೆಯ ಆಳ ತಿಳಿಸಲು ಆಗದು. ಅಂತ ಹೇಸಿಗೆ ಹುಟ್ಟಿಸೋ ಕೆಲಸವೆಲ್ಲ ಮಾಡುವ ಆಳಿಗೆ ಚಿಕ್ಕ ಆಸೆಯೂ.. ದುರಾಸೆಯಂತೆ ಕಾಣುವುದು ದಣಿಗಳಿಗೆ..
ಈ ಜಿಜ್ಞಾಸೆಯ ವಿಷಯ ಇಲ್ಲಿಗೆ ಬಿಡೋಣ... ಕೆಂಪಮ್ಮನ ಕಥೆ ಮುಂದುವರೆಸೋಣ.
ಕೆಂಪಿ ಮಗ SSLC ಪರೀಕ್ಷೆಯಲ್ಲಿ ಒಳ್ಳೆ ಅಂಕ ತೊಗೊಂಡು ತೇರ್ಗಡೆ ಹೊಂದಿದ. ಊರಿನ ಹತ್ತಿರದ ಎ. ಪಿ. ಸ್ ಕಾಲೇಜಿನಲ್ಲಿ ಕಲಾ ವಿಭಾಗಕ್ಕೆ ಸೇರಿಕೊಂಡಾಗ. ತಾರಕ್ಕ "ಕಾಲೇಜು ಮೆಟ್ಲು ಹತ್ತಿದ ಮಗ, ನಾಳೆ ದೊಡ್ಡ ಆಫೀಸರ್ ಆದ್ರೆ ಮನೆ ಕೆಲ್ಸ ಬಿಟ್ಬುಡ್ತೀಯ ಕೆಂಪಿ ಅಂತ ಚೂಡಾಯಿಸಿ ಕೇಳಿದ್ದರು. ಆಸೆ ಅನ್ನೋ ಆಶಾಭಾವ ಮೂಡಿದರು.. ಇಲ್ಲವ್ವೋ.. ಎಂದು ಹೇಳಿದ್ಲು ಕೆಂಪಿ.
ಮಗ ಅಂದ್ರೇನೆ ಆಶಾಭಾವ, ದಾರಿದೀಪ... ಅದ್ರಲ್ಲೂ ಬಡಕುಟುಂಬಗಳ ಬಂಡವಾಳವೇ.. ಛೇ ಛೇ.. ಜೀವಾಳವೇ ಮಕ್ಕಳು.....
ಈ ಮಗನಿಗೆ ಹೋರಾಟದ ಗೀಳು ಹತ್ತಿಸಿದ್ದು ಮುನೇಗೌಡ್ರ ಬಾವಮೈದುನ ಶಂಕ್ರ. ಮಾತು ಮಾತಿಗೂ ಪ್ರತಿಭಟನೆ ಮಾಡ್ತಿನಿ ನ್ಯಾಯ ಕೊಡಿಸ್ತಿನಿ ಅಂತ ಪುಂಕಾನು ಪುಂಕವಾಗಿ ಅಕ್ಕನ ಮುಂದೆ ಕಥೆ ಕಟ್ಟಿ ಹೇಳ್ತಿದ್ದ. ಇವನ ಮಾತಿಗೆ ಮರುಳಾಗಿ ಅವನ ಹಿಂದೆ ಹೋದ ಮಹದೇವು. ನಮ್ಮೋರಿನ ಹಲವು ಬಡ ಮಕ್ಕಳಿಗೆ ಕೆಲಸ ಕೊಟ್ಟಿದ್ದ distillery ವಿರುದ್ಧ ಸಮರ ಸಾರಿದ್ದ. ಮೊದಮೊದಲು ಇವನ ಮಾತಿಗೆ ಮರುಳಾಗಿ ಬಹಳ ಜನ ತಮ್ಮ ಕೆಲಸವನ್ನ ಪಣಕಿಟ್ಟು ಹೊರಾಟ ಮಾಡಿದ್ದರು. ಸಂಬಳ ಹೆಚ್ಚಳ, ಕೆಲಸ ಮಾಡುವ ವೇಳೆಯಲ್ಲಿ ಸುಧಾರಣೆ, ರೇಷನ್ ಅಕ್ಕಿ, ಮಕ್ಕಳಿಗೆ ಶಾಲೆ ಹೀಗೆ ಇವರ ಬೇಡಿಕೆಯ ಪಟ್ಟಿ ಬಹಳ ಇತ್ತು. ಈ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ಮಹದೇವು. ಇವರಿಬ್ಬರ ಅಬ್ಬರ ಎಷ್ಟು ಇತ್ತು ಎಂದರೆ. Distillery ಮಾಲೀಕರು ದೆಹಲಿಯಿಂದ ದೌಡಾಯಿಸಿದ್ದರು. ಶಂಕ್ರ ಒಳಗೊಳಗೇ ಏನೋ ಸಂಚು ಮಾಡಿ ಈ ಹೊರಟ ಹಳಿತಪ್ಪಿಸಿ ತಲೆಮರೆಸಿ ಓಡಿಹೋದ. ಸಿಕ್ಕಿಬಿದ್ದವರು ಮಹದೇವು, ಮೋನಪ್ಪ ಮುಂತಾದವರು. ಕೆಲಸ ಕಳೆದುಕೊಂಡು ತಣ್ಣಗಾದರು ಕೆಲವರು. ಕೆಲವರು ತಾವಾಯಿತು ತಮ್ಮ ಕೆಲಸವಾಯಿತು ಅಂತ ಸುಮ್ನೆ ಆದರು. ಕೆಲಸವೂ ಇಲ್ಲದ ಸುಮ್ಮನೆ ಒಣ ಪ್ರತಿಷ್ಠೆಗೆ ಹೊರಟ ಮುಂದುವರೆಸಿ, ಕಾಲ ಕ್ರಮೇಣ ಜನರ ನೆನಪಿನಿಂದ ಅಳಿಸಿ ಹೋಗುವುದ ಸುಮ್ಮನೆ ನೋಡುತ್ತಾ ಇದ್ದ ಮಹದೇವು ಒಂದು ಕಡೆ.
ಇಂತ ಹತ್ತು ಹಲವು ಬೇಡದ ಹೊರಟದ ನಾಯಕನಾಗಿ ಬೇಕೂ ಬೇಡದ ವ್ಯಕ್ತಿಯಾಗಿ ಹಳ್ಳಿ ಹಳ್ಳಿಗು ಚಿರಪರಿಚಿತನಾದ ಮಹದೇವು. ಮನೆಗೆ ಮಾರಿ ಊರಿಗೆ ಉಪಕಾರಿ, ಮನೆಗೆ ಒಂದು ಚೀಲ ಅಕ್ಕಿ ತಂದು ಹಾಕಿದ್ದು ನಾ ಕಾಣೆ. ಆದ್ರೆ ಊರಿನ ಬಡವರ ಹೊಟ್ಟೆ ಚೀಲ ತುಂಬುವ ಹೋರಾಟದಲ್ಲಿ ಸದಾ ಮಗ್ನ. ಇವನಿಗೆ ಮದುವೆ ಮಾಡಿ ಅವನ ಹೆಂಡತಿ ಮಕ್ಕಳನ್ನು ನೋಡಿ ಕೊಳ್ಳುವ ಜವಾಬ್ದಾರಿ ಹೊತ್ತ ಕೆಂಪಿಗೆ ಎರಡು ವರ್ಷದ ಹಿಂದೆ ಒಂದು ಆಘಾತ ಕಾದಿತ್ತು. ಇವರ ಸೊಸೆ ಕೇರಳದಿಂದ ಬಂದಿದ್ದ ನಾಯರ್ ಜೊತೆ ಓಡಿ ಹೋದಳು ಎಂಬ ಸುದ್ದಿ ಇವಳ ಕೀವಿಗೆ ಬಿತ್ತು. ತವರಿಗೆ ಹೋಗತೀನಿ ಅಂತ ಮಗನನ್ನು ಮನೇಲಿ ಬಿಟ್ಟು ಹೋದ ಸೊಸೆ ಮರಳಿ ಬರಲೇ ಇಲ್ಲಾ. ಯಾಕೆ ಬರಲಿಲ್ಲ ಎಂದು ಮಹದೇವು ತಲೆ ಕೆಡಿಸಿಕೊಳ್ಳಲಿಲ್ಲ. ಕೆಂಪಿ ಎರಡು ದಿನ ಘರಾಬಡಿದವಳ ಹಾಗೆ ಇದ್ದು. ಮೂರನೇ ದಿನ ಮೊಮ್ಮಗನ ಶಾಲೆಗೆ ಬಿಟ್ಟು, ಗೌಡ್ರ ಮನೆ ಕೆಲ್ಸಕ್ಕೆ ಹಾಜರಾದಳು. ಅವಳ ಅಳು ಕೇಳುವವರಾರು. ಸೊಸೆ ಓಡಿ ಹೊದಳಂತೆ ದಿಟವಾ ಎಂದು ಕೇಳಿದವರ ಬಾಯಿಬಡಿದು, ಮಗ ಮೊಮ್ಮಗನ ಮನ್ಸ್ಸು ಹಾಳಾಗದ ಹಾಗೆ ನೋಡಿಕೊಂಡಿದ್ದು ಇದೇ ಕೆಂಪಿ.
ಗೌಡ್ರು ಇವಳ ಕಷ್ಟ ನೋಡಿ, ನಿನ್ನ ಮಗನಿಗೆ ಇನ್ನೊಂದು ಮದುವೆ ಮಾಡುವ ಬಿಡು, ಅವನಿಗೆ ಸ್ವಲ್ಪ ಜಾಗ ಬರೀತೀನಿ ದುಡಿಮೆ ಮಾಡಿದ್ರೆ ಸರಿ ಹೋಗ್ತಾನೆ ಅಂತ ಹೇಳಿ ಎಂಟು ವರ್ಷ ಅಯ್ತು. ಹೇಳಿದ ದಿನವೇ ಪೇಪರ್ ಮೇಲೆ ರುಜುವಾತು ಮಾಡಿಸ್ಕೊಂಡ್ಬುಡಬೇಕಾಗಿತ್ತು. ಇನ್ನು ಅದರ ಬಗ್ಗೆ ವಿಚಾರವೇ ಇಲ್ಲಾ. ಮಗನಿಗೆ ಮದುವೆ.... ಯಾರು ಹೆಣ್ಣು ಕೊಡ್ತಾರೆ? ತಲೆಗೂದಲು ನೆರೆತಾಯಿದೆ, ಕಣ್ಣ ಹತ್ರ ಸುಕ್ಕು ಮೂಡುತ್ತಿವೆ. ಮೊಮ್ಮಗ ಈಗ ಹೈ school. ಬರೋಳು ಈ ಮಗೀನ ನೋಡ್ಕೋತಾಳ? ಕಾಲ ತುಂಬಾ ಬದಲಾಗದೆ, ಹೆಣ್ಣು ಮಕ್ಕಳು ಕಷ್ಟ ಪಡಲ್ರು, ನಮ್ಮ ಕಾಲದವರ ತರ. ಆಸೆ ಈಡೇರದಿದ್ದರೆ ತಪ್ಪು ದಾರಿ ಹಿಡೀತಾರೆ. ಮದುವೆ ಮಾಡಿ ಮತ್ತೆ ಬೇಜಾರಿನಲ್ಲಿ ಕಾಲ ಕಳೆಯಲು ಅವಳಿಗೆ ಇಷ್ಟ ಇರಲಿಲ್ಲ. ಮಗ ತಾನಾಗೇ ಯಾರನ್ನಾದರೂ ಕರ್ಕೊಂಡು ಬಂದರೆ ನೋಡೋಣ ಅಂತ ಇದ್ದಳು.
ಇದೆಲ್ಲದರ ನಡುವೆ ಒಮ್ಮೆಯೂ ಗೌಡ್ರು ಮಾತ್ರ ಕೊಡುವ ಜಾಗದ ಬಗ್ಗೆ ಉಸಿರೇತ್ತಿಲ್ಲ.
ಈ ಮಾತುಕಥೆಯಾದಮೇಲೆ, ಗೌಡ್ರ ಪಾಳು ಬಿದ್ದ ಜಮೀನಿಗೆ ಒಳ್ಳೆ ರೇಟು ಬಂದಿತ್ತು. ಅದ್ಯಾರೋ ಗುರುಜಿ ಅಂತೆ ಆಶ್ರಮ ಕಟ್ಟುತ್ತಾರಂತೆ ಅಂತ ಬಿಳಿ ಬಟ್ಟೆ ಸುತ್ತಿಕೊಂಡು ತಲೆ ನುಣ್ಣಗೆ ಬೋಳಿಸಿದ್ದ ಒಬ್ಬ ವ್ಯಕ್ತಿ ದೊಡ್ಡ ಪಳಪಳಗುಟ್ಟುವ ಕಾರ್ನಗೆ ಬಂದು ಮಾತಾಡಿದ್ದ. ಕೆಂಪಿ ಮುಂದೇನೆ, ಅವನ ಮಾತಿಗೆ ಗೌಡ್ರು ಆಯ್ತು ಮಾತಾಡೋಣ ಅಂತ ಹೇಳಿ ಕಳಿಸಿದ್ರು. ಅವತ್ತು ಅಷ್ಟೇ ಕೆಂಪಿ ತಲೇಲಿ ಇದ್ದದ್ದು ಆ ಆಶ್ರಮದಲ್ಲಿ ಕೆಲ್ಸ ಗಿಲ್ಸ್ ಸಿಕ್ಕಿದ್ರೆ ದುಡ್ಡು ಬತ್ತದೆ ಅಂತ..., ಅಷ್ಟೇ...,
ಗೌಡ್ರ ಎಲ್ಲಾ ಜಮೀನಿಗೂ ಒಂದೊಂದು ದಾರಿ ಸಿಕ್ಕಿತು. ಎಲ್ಲಾ ಲಕ್ಷ್ಮಿದೇವಿ ಕೃಪಾಕಟಾಕ್ಷ. ಬೆಂಗಳೂರು ಸಿಟಿ ಸೇರಿದ್ದ ಮಕ್ಕಳು ಮರಳಿ ಮಣ್ಣಿಗೆ ಅಂತ ವಾಪಾಸ್ ಬಂದಿದ್ದವು.
ಮೊಮ್ಮಕ್ಕಳು ಎಲ್ಲಾ ಬರೀ ಇಂಗ್ಲಿಷೆಯ ಮಾತಾಡೋದು. ನಮ್ಮ ಸೊಗಡು ಏನು ಗೊತ್ತಿಲ್ಲ. ಮೊಮ್ಮಗಳಂತು ಯಾವಾಗು ನಿಕ್ಕರು ಹಾಕೊಂಡೆ ಓಡಾಡೋದು. ಸರಿ ನಮಗೆ ಯಾಕೆ ದೊಡ್ಡರ ಇಸ್ಯಾ ...
ಕೆಂಪಿಗೆ ಕೊಡ್ತಿನಿ ಅಂದಿದ್ದ ಜಾಗಕ್ಕೆ ಯಾರೋ ಬಂದು ಸರ್ವೇ ಮಾಡಿ ಹೋಗಿದ್ದು ಅವಳ ಗಮನಕ್ಕೆ ಬಂದಿತ್ತು. ಮನಸ್ಸಿಗೆ ಕಸಿವಿಸಿ, ತಾನು ಆಸೆ ಪಟ್ಟ ಜಾಗ. ಅಲ್ಲಿ ಏನು ಬೆಳಿಯೋಕೆ ಯೋಗ್ಯವಾಗಿರಲಿಲ್ಲ ಅಂತ ತಾನೆ ಈ ಆಸೆ ಮೂಡಿದ್ದು. ಇವಾಗ ಅಲ್ಲಿಗೆ ಯಾರೋ ಮನೆಮೇಲೆ ಮನೆ ಕಟ್ಟಿಸಲು ಬಂದಿದ್ದಾರೆ. ಜಾಗ ಆದ್ರೆ ಅಯ್ತು ಅವರಿಗೆ, ಅದರ ಫಲವತ್ತತೆ ಯಾರಿಗೆ ಬೇಕು. ಈ ಪಾಪಾಸ್ಕಳ್ಳಿ ಬೆಳ್ಕೊಂಡಿದ್ದ ಜಗಕ್ಕೆ ದುಡ್ಡು ಬೇರೆ ಕೊಟ್ಟು ಮನೆ ಕಟ್ಟಿ ಬಾಡಿಗೆ ಬರುವ ಹಾಗೆ ಮಾಡ್ತಾರೆ ಅಂತ ಸುದ್ದಿ. ಕೆಂಪಿಗೆ ಹೊಟ್ಟೇಲಿ ಸಂಕಟ, ಹೇಳ್ಕೊಳೋಕೆ ಆಗದ ಹತಾಶೆ. ದಿನಾ ಆ ಜಗದಲ್ಲಿ ಏನಾದ್ರು ಕಾರ್ಯ ನೆಡಿಯೋದು ನೋಡಿ ಕೆಂಪಿ ಮತ್ತು ಅಂಜನಪ್ಪನಿಗೆ ಏನೋ ಕಸಿವಿಸಿ.
ಅವತ್ತು ಇಬ್ಬರು ಗೌಡ್ರನ್ನ ಕೇಳೋಣ ಅಂತ ತೀರ್ಮಾನ ಮಾಡಿ ಹನ್ನೊಂದು ಗಂಟೆ ಹೊತ್ತಿಗೆ ಎರಡು ಎಳನೀರು ಕೈಲಿ ಹಿಡಿದುಕೊಂಡು ಹೋದರು. ಗೌಡ್ರ ಮನೆ ಮೊದಲಿಗಿಂತಲೂ ಇನ್ನು ವಿಶಾಲವಾಗಿತ್ತು. ತಣ್ಣಗೆ ಗಾಳಿ ಬೀಸುತಿತ್ತು. ಇಷ್ಟೊತ್ತಲ್ಲಿ ಗೌಡ್ರು ಉಯ್ಯಲೆ ಮೇಲೆ ಕೂತು ಪೇಪರ್ ಓದುತ್ತಾ ಇರುತ್ತಾರೆ.
ಅವತ್ತು ಹಂಗೆ, ಪೇಪರ್ ಓದುತಿದ್ದ ಗೌಡ್ರು ಕೆಂಪಿ ಮತ್ತೆ ಅಂಜನಪ್ಪನ ಕಂಡು. "ಓ.. ಕೆಂಪಿ ಅಂಜಪ್ಪ.. ಎನ್ ಇಬ್ಬರು ಜೊತೆಗೆ ಬಂದಿದಿರಾ.. ಆಯ್ತಾ ಎಲ್ಲಾ ಕೆಲಸ?" ಎಂದರು.
ಅಂಜನಪ್ಪ "ವಸಿ ಮಾತಾಡೋದಿದ್ದು ಬುದ್ದಿ... ಅದ್ಕೆ ಸಮಯ ಮಾಡ್ಕೊಂಡು ಬಂದ್ವಿ"
ಗೌಡ್ರು "ನಾಷ್ಟ ಆಯ್ತಾ ಇಬ್ಬರದು... ಏನಮ್ಮ ಶೀಲಾ.. ಬಾಮ್ಮ ಇಲ್ಲಿ. "
ಅಂಜನಪ್ಪ "ಅಯ್ತು ಬುದ್ದಿ, ನಮಗೇನು ಬೇಡ.. ಸುಮ್ನೆ ಯಾಕೆ ಅಮ್ಮೋರಿಗೆ ತೊಂದ್ರೆ..."
ಗೌಡ್ರು " ಅಯ್ಯಾ ಅದ್ರಲ್ಲಿ ಎನ್ ತೊಂದ್ರೆ... ಏನಮ್ಮ ಶೀಲಾ.. ಇವರಿಗೆ ತಿನ್ನಕ್ಕೆ ಏನಾದರು ಕೊಡು... ಎಂದರು.
ಶೀಲಾ ಗೌಡ್ರ ಹಿರಿಮಗನ ಎರಡನೇ ಹೆಂಡತಿ. ಮೊದಲನೇ ಹೆಂಡತಿ ಒಂದು ಮಗುವಿನ ನಂತರ ದೇವರ ಪಾದ ಸೇರಿದ್ದಳು. ಇವರಿಗೆ ಒಬ್ಬ ಮಗ, ಸವತಿಯ ಮಗಳ ಆರೈಕೆ ಮಾಡಿದ್ದನ್ನು ಗೌಡ್ರು ಈಗಲೂ ಹೋಗಳುತ್ತಾರೆ. ಅಡುಗೆ ಮನೆಯಿಂದ ತಟ್ಟೆಯಲ್ಲಿ ಎರಡು ಎರಡು ತಣ್ಣಗಾದ ಇಡ್ಲಿ ನೀರು ಚಟ್ನಿ ತಂದು ಕೊಟ್ಟರು. ಒಂದು ತುತ್ತು ಬಾಯಿಗೆ ಹಾಕೊಂಡ ಕೆಂಪಿಗೆ ನೀತಿಗೆ ಹತ್ತಿತು, ಬಿಕ್ಕಳಿಕೆ ಶುರುವಾಯಿತು.
ಗೌಡ್ರು "ಏನಮ್ಮ ಶೀಲಾ, ನೀರು ಕೊಡ್ಬೇಕು ಅನ್ನೋ ಪರಿಜ್ಞಾನ ಇಲ್ವೇನಮ್ಮ. ಹೋಗು ಬೇಗ ಕೊಡು... ಪಾಪ ಕೆಂಪಿ.."ಎಂದರು.
ನೀರು ಕುಡಿದು ಸ್ವಲ್ಪ ಸುಧಾರಿಸಿದಳು ಕೆಂಪಿ. ಶೀಲಮ್ಮೋರ ಮುಖ ಕೆಂಡಾಮಂಡಲವಾಗಿತ್ತು. ಕೆಂಪಿ ಸುಮ್ನೆ ಒಲ್ಲದ ನಗು ಬೀರಿ, ತಟ್ಟೆ ತೊಗೊಂಡು ಹೋಗಿ ತೊಳಿಯೋಕೆ ಶುರು ಮಾಡಿದಳು.
ಗೌಡ್ರು "ಕೆಂಪಮ್ಮ ಬಾರಮ್ಮ, ಆಮೇಲೆ ಮಾಡು.. ಏನೋ ಮಾತಾಡೋಕೆ ಅಂತ ಬಂದು ಕೆಲಸ ಮಾಡೋಕೆ ಹೋಗ್ಬೇಡ" ಎಂದರು.
ಬಿರಬಿರನೇ ತಟ್ಟೆ ಬೆಳಗಿ "ಓ ಬಂದೆ ಕಣಪ್ಪ"ಅಂದ್ಲು ಕೆಂಪಿ.
ಚಿಕ್ಕವಳಿದ್ದಾಗ ಗೌಡ್ರು ಕೆಂಪಿಗೆ ಬಹಳ ಹೊಡೆದು ಬುದ್ದಿ ಹೇಳಿ ಕೊಡೋರು. ಕೆಲವೊಮ್ಮೆ ಬಾಸುಂಡೆ ಬರುವ ತನಕ ಹೊಡೆದಿದ್ದರು. ಮನೆಯಲ್ಲಿ ಹೆಂಡತಿ, ಅಮ್ಮ ಇಬ್ಬರು ಜಗಳ ಆಡಿದಾಗ, ಈ ಪುಟ್ಟ ಕೆಂಪಿಯ ಮೇಲೆ ತೀರಿಸಿಕೊಂಡಿದ್ದು ಇದೆ.
ಕೆಂಪಿಗೆ ಹೇಳೋರು ಕೇಳೋರು ಯಾರು ಇರಲಿಲ್ಲ. ಚಿಕ್ಕವಯಸ್ಸಿನಲ್ಲಿ ತಂದೆ ಸೇಂದಿ ಕುಡಿದು ತೀರಿಕೊಂಡಿದ್ದ.
ಆ ಊರಿಗೆ ಕಂದಾಯ ಕಟ್ಟಿಸಿಕೊಳ್ಳಲು ಆಗಾಗ್ಗೆ ಹೋಗುತಿದ್ದ ಗೌಡ್ರ ಕಣ್ಣಿಗೆ ಬಿದ್ದಿದ್ದು ಕೆಂಪಿಯ ತಾಯಿ ಬೀರವ್ವ. ಬೀರವ್ವನ ಗಂಡ ಕಂದಾಯ ಕಟ್ಟೋಕೆ ಆಗದೆ ಮನೆ ಒತ್ತೆ ಇಟ್ಟಿದ್ದು ಇದೇ ಗೌಡ್ರು ತಾವು. ಮನೆ ಮಠ ಕಳ್ಕೊಂಡು ಕುಡಿತಕ್ಕೆ ಶರಣಾಗಿದ್ದ ಹೋನಪ್ಪ. ಅವನ ಸರ್ವ ಅಸ್ತಿಯೂ ಪುಡಿಗಾಸಿಗೆ ಗೌಡ್ರಿಗೆ ಬರೆದುಕೊಟ್ಟಿದ್ದ.
ಗೌಡ್ರ ಸಹವಾಸದಿಂದ ಬೀರವ್ವ ಬಸಿರಾದಳು, ಕೆಂಪಿ ಹುಟ್ಟಿದಳು. ಬಡತನ ಏನು ಕಮ್ಮಿ ಆಗಲಿಲ್ಲ.
ವರ್ಷ ಕಳೆದಂತೆ ಗೌಡ್ರು ಅಲ್ಲಿಗೆ ಬರೋದು ಕಮ್ಮಿ ಮಾಡಿದರು. ಬಡತನದ ಬೇಗೆಯಲ್ಲೇ ಬಸವಳಿದ ಕೆಂಪಿಯ ಕುಟುಂಬ ಕೊನೇದಾಗಿ ತಮ್ಮ ಕೆಂಪಿಯನ್ನು ಗೌಡ್ರಿಗೆ ಮಾರಿದರು. ಆಮೇಲೆ ಅವರ ಕಥೆ ಏನಾಯಿತೋ ಗೊತ್ತಿಲ್ಲ. ಕೆಂಪಿ ಗೌಡ್ರ ಮಗಳು ಎಂದರೆ ತಪ್ಪೇನಿದೆ. ಆದ್ರೆ ಈ ವಿಷ್ಯ ಹೇಳೋಕೆ ಪ್ರತ್ಯಕ್ಷ ಸಾಕ್ಷಿ ಯಾರಿದ್ದಾರೆ. ಸ್ವತಃ ಕೆಂಪಿಗೆ ಗೊತ್ತಿಲ್ಲ ಈ ಇಸ್ಯಾ. ಒಟ್ಟಿನಲ್ಲಿ ಜೀತ ಅನ್ನೋದು ಯಾವ ರೂಪದಲ್ಲಾದರೂ ಹೆಗಲೇರಬಹುದಾಗಿತ್ತು ಆ ಒಂದು ಕಾಲಘಟ್ಟದಲ್ಲಿ.
ಗೌಡ್ರು "ಏನಪ್ಪಾ ಅಂಜನಪ್ಪ, ಹೇಳು ಕೆಲಸ ಹೆಂಗೆ ನಡೀತಿದೆ. ಏನು ಸಮಾಚಾರ?"
ಅಂಜನಪ್ಪ "ಚೆನ್ನಾಗೆ ನಡೀತಿದೆ... ಬುದ್ದಿ "
ಗೌಡ್ರು "ಏನು ಇಸ್ಯ ಹೇಳು.."
ಅಂಜನಪ್ಪ ಮಾತು ಶುರು ಮಾಡೋ ಮುಂಚೆನೇ ಕೆಂಪಿ "ಅಪ್ಪೋರೆ.. ನೀವು ಆ ಗದ್ದೆಕಡಿಕ್ಕೆ ಹೋಗೋ ತಾವು ಇರೋ ಜಾಗ ನಮಗೆ ಬರೀತೀನಿ ಅಂದಿದ್ರಿ... ಅಲ್ಲಿ ಏನೋ ಕೆಲ್ಸ ನಡಿತದೇ... ಅದ್ಕೆ ಕೇಳ್ಕೊಂಡು ಹೋಗೋಣ ಅಂತ ಬಂದೋ.."ಎಂದಳು
ಗೌಡ್ರಿಗೆ ಗಾಬರಿಯಾಯಿತು , ಆಮೇಲೆ ಮೀಸೆ ತೀಡುತ್ತಾ "ಕೆಂಪಿ.. ಯಾವ ಜಾಗ?"
ಕೆಂಪಿ "ಅದೇ ಕಣಪ್ಪಾ,, ಗದ್ದೆಗೆ ಹೋಗೋ ದಾರಿನಾಗೆ ಪಾಪಸ್ಕಳ್ಳಿ ಬೆಳ್ಕೊಂಡು ಉಳುಮೆಗೆ ಯೋಗ್ಯವಾಗಿಲ್ಲ ಅಂತ ಬುಟ್ಟಿದ್ರಲ್ಲ ಆ ಜಾಗ "
ಗೌಡ್ರು ಪಕ್ಕ ನಿಂತಿದ್ದ ಶೀಲ ಬೇಗಬೇಗನೆ ಮಹಡಿಯ ಕಡೆ ಹೋಗಿದ್ದು ನೋಡಿ, ಕೋಪ ಮಾಡಿಕೊಂಡು ಹೋದ ಹಾಗೆ ಅನಿಸಿತು ಗೌಡ್ರಿಗೆ.
ಗೌಡ್ರು "ಕೆಂಪಿ, ನಾನು ಆ ಜಾಗ ಕೊಡ್ತಿನಿ ಅಂತ ಹೇಳಿದ್ನ?"
ಕೆಂಪಿ "ಹ್ಞೂ, ಅವತ್ತು ನನ್ನ ಸೊಸೆ ಓಡಿ ಹೋದಾಗ ನೀವು ಕೊಡ್ತಿನಿ ಅಂದಿದ್ರಿ. ಮರೆತುಹೋಗಿದೀರಾ ಅನ್ಸುತ್ತೆ ಅಪ್ಪೋರೆ.." ಅಂದಳು.
ಗೌಡ್ರು "ಹ್ಮ್ಮ್ಮ್.. ಅಮೇಕೇ ನಿಧಾನವಾಗಿ ಮಾತಾಡುತ್ತೀನಿ.. ಇವಾಗ ಮನೆಗೆ ಹೋಗು" ಎಂದರು.
ಅಂಜನಪ್ಪ ಕೆಂಪಿ ಇಬ್ಬರು ಅಯ್ತು ಅಂತ ತಂದಿದ್ದ ಎಳನೀರು ಹೊಸ್ತಿಲ ಹತ್ತಿರ ಇಟ್ಟು ಹೊರಟರು.
ಅವ್ರು ಅಷ್ಟು ದೂರ ಹೋಗಿದ್ದು ನೋಡಿ, ಒಳಗಿದ್ದ ತಾರಕ್ಕ "ಏನಂತೆ ಅವಳದು?" ಎಂದರು
"ಏನಿಲ್ಲ ಬಿಡು, ನೀನು ಯಾಕೆ ಎದ್ದು ಬಂದೆ, ಡಾಕ್ಟರ್ ಹೇಳಿಲ್ಲ್ವಾ ರೆಸ್ಟ್ ಮಾಡಬೇಕು ಅಂತ.."
"ಆ ನನ್ನ ಸವತಿ ಮಗಳಿಗೆ ಏನಾದ್ರು ತುಂಡು ಜಾಗ ಬರೆದರೆ, ನಾನು ಸತ್ತ ಮೇಲು ದೆವ್ವ ಆಗಿ ಬಂದು ನಿನ್ನ ಕಾಡುತ್ತೀನಿ " ಅಂತ ಉಸಿರಿಲ್ಲದ ಉಸಿರಲ್ಲಿ ಬುಸುಗುಟ್ಟಿದರು ತಾರಕ್ಕ.
ಗೌಡ್ರು ಏನು ಮಾತಾಡದೆ ಸುಮ್ಮನೆ ಕೂತರು. ಗಂಡನ ಬಹುತೇಕ ಪಾಪದ ಕಾರ್ಯಗಳ ಸತ್ಯಾಸತ್ಯತೆ ಹೆಂಡತಿಗೆ ದರ್ಶನವಾಗುತ್ತೆ.
ಕೆಲವೊಮ್ಮೆ ಬೇಗ ಕೆಲವೊಮ್ಮೆ ನಿಧಾನವಾಗಿ.
ಆದ್ರೆ ಸತ್ಯ ಅನ್ನೋದು ಗೊತ್ತಾಗೇ ಆಗುತ್ತೆ ಆಗಲೇ ಬೇಕು, ಅದು ಕಾಲದ ನಿಯಮ.
ತರಕ್ಕನಿಗೂ ಬೀರವ್ವನ ವಿಷ್ಯ ಗೊತ್ತಾದಾಗ, ಕೆಂಪಿಯ ಮೈಮೇಲೆ ಬಿದ್ದ ಬಾಸುಂಡೆಗಳ ಲೆಕ್ಕ ಹಾಕೋದು ಕಷ್ಟ ಆಗಿತ್ತು. ಅದೆಷ್ಟು ಚೀರಾಟ ಕೇಳುತಿತ್ತು. ಗೌಡ್ರ ಅತ್ತಿಗೆ ಕಮಲಮ್ಮ ಆ ಹುಡುಗಿ ಪ್ರಾಣ ಉಳಿಸಿರುವ ಎಷ್ಟೋ ನಿದರ್ಶನಗಳು ಇವೆ. ತರಕ್ಕನಿಗೆ ಹಾವು ಕಡಿದು ಕಾಲು ಕೀವುಗಟ್ಟಿ ಹಾಸಿಗೆ ಹಿಡಿದಾಗ ಇದೇ ಕೆಂಪಿ ಅವರ ಸೇವೆ ಸ್ವಂತ ಮಗಳ ಹಾಗೆ ಮಾಡಿದಳು. ಆ ಘಟನೆ ಆದ ಮೇಲೆ ಇವಳ ಮೇಲೆ ಸ್ವಲ್ಪ ಅನುಕಂಪ ತೋರಿಸಲು ಶುರು ಮಾಡಿದರೇ ಹೊರೆತು ಪ್ರೀತಿ ಅಂತ ಅಲ್ಲಾ.
ಈ ಘಟನೆ ಆದ ನಂತರ ಗೌಡ್ರ ಮಕ್ಕಳು ಅಂಜನಪ್ಪನನ್ನು ತೋಟದ ಕಡೆ ಬರಹೇಳಿದ್ದರು. ಅಂಜನಪ್ಪ ಹೆಂಡತಿ ಹತ್ತಿರ ಏನು ಹೇಳಿಲ್ಲ, ಏನೋ ಕೆಲಸ ಇರಬೇಕು ಅಂತ ಅವರ ಪಾಡಿಗೆ ಅವರು ಹೋದರು. ಹೋದವರು ಎಷ್ಟೊತ್ತಾದರೂ ಬರಲೇ ಇಲ್ಲಾ. ಕೆಂಪಿ ಮತ್ತೆ ಅವರ ಮೊಮ್ಮಗ ಹುಡುಕಲು ಶುರು ಮಾಡಿದರು. ಎಲ್ಲು ಕಾಣಿಸಲಿಲ್ಲ. ಆಮೇಲೆ ಸ್ವಲ್ಪ ದೂರದಲ್ಲಿ ಒಂದಷ್ಟು ಜನ ನಿಂತಿದ್ದರು. ಅಲ್ಲಿಗೆ ಓಡಿದ ಮೊಮ್ಮಗ ಕಿರಣ.
ಕೆಂಪಿ ಅಲ್ಲಿಗೆ ಬಂದಾಗ ಎಲ್ಲರು ಅವಳ ಮುಖ ನೋಡುವವರೇ.. ಏನು ಇಸ್ಯ ಅಂತ ಅವಳಿಗೆ ಗೊತ್ತಿರಲಿಲ್ಲ... ಹಾಗೆ ಮುಂದೆ ಮುಂದೆ ಹೋದಾಗ.. ಅವಳ ಗಂಡ ಅಂಜನಪ್ಪನ ಹೆಣ ಕಂಡಿತು. ಮಾತೆ ಹೊರಡಲಿಲ್ಲ. "ಯೆಂಡ ಕುಡಿದು ತಿಪ್ಪೆಲಿ ಬಿದೊಗವ್ನೆ, ಅದು ಆ distilleryಯಿಂದ ಬಾರೋ ಗಲೀಜು ಬೇರೆ ಸೇರುತ್ತೆ, ಎನ್ ವಾಸನೆ ಯಪ್ಪಾ..."ಅಂತ ಅಲ್ಲಿಂದ ಹೋಗುತ್ತಿದ್ದವರ ಉದ್ಘಾರ ಕೇಳಿತು.."ಓ..." ಎಂದು ಆಳಳು ಶುರು ಮಾಡಿದಳು ಕೆಂಪಿ. ಎದೆ ಬಡಿದು ಕೊಂಡು, ಕೂದಲು ಕಿತ್ತು ಬಾಯಿ ಬಾಯಿ ಬಡ್ಕೊಂಡು ಅತ್ತಳು. ಅವಳ ಆ ಚೀರಾಟ, ಬಾಸುಂಡೆ ಬಿದ್ದಾಗ ಚೀರಿದನ್ನು ಮೀರಿಸಿತ್ತು.
ಗೌಡ್ರು, ಅವರ ಹಿರಿಯ ಮಗ ಇಬ್ಬರು ಅಂಜನಪ್ಪನ autopsy ಮಾಡಿಸಲು ಸಹಾಯ ಮಾಡಿ. ಅವನ ತುಂಡರಿಸಿದ ಮತ್ತೆ ಹೊಲೆದಿದ್ದ ಮೃತ ದೇಹವನ್ನು ಕೆಂಪಿಗೆ ಒಪ್ಪಿಸಿಸದರು.
ಮಗ ಮಹಾದೇವನ ಪತ್ತೆ ಇಲ್ಲಾ. ಎಲ್ಲಿ ಯಾವ ಹೊರಾಟದಲ್ಲಿ ಯಾವ ಊರಿಗೆ ಹೋಗಿದ್ದಾನೊ ಗೊತ್ತಿಲ್ಲ. ಮೊಬೈಲ್ ಸಹ ಕೆಲಸ ಮಾಡೋಲ್ಲ ಅವನದು. ಏನು ಮಾಡೋದು ಅಂತ ಗೊತ್ತಾಗದೆ ಊರವರ ಒತ್ತಾಯದ ಮೇರೆಗೆ ಮೊಮ್ಮಗನ ಕೈಲಿ ಕಾರ್ಯ ಮಾಡಿಸಿದಳು ಕೆಂಪಿ.
ವೈಕುಂಠ ಮುಗಿಸುವ ಹೊತ್ತಿಗೆ, ಕೆಂಪಿ ಮನೆ ಕೆಲ್ಸಕ್ಕೆ ಬರೋದು ಬೇಡ ಅಂತ ಗೌಡ್ರು 10 ಲಕ್ಷ ರೂಪಾಯಿ ಕೊಟ್ಟು ಕಳುಸಿದ್ದರು. ಕೋಪ ಎಷ್ಟು ಇತ್ತು ಅವತ್ತು, ಏನು ಮಾಡೋದು ಅಂತ ಗೊತ್ತಾಗದೆ ಮನೆಯಲ್ಲಿ ಇದ್ದ ಬಟ್ಟೆಗಳ ರಾಶಿ ಹಾಕಿಕೊಂಡು ಒಂದೊಂದೇ ಕಲ್ಲಿನ ಮೇಲೆ ಒಗೆದಳು.
ಗೌಡ್ರ ಭೇಟಿ ಮಾಡಲು ಮನೆಗೆ ಹೋದಾಗ ಒಳಗಿದ್ದರು ಇವಳ ಮಾತನಾಡಿಸದೆ ಏನೋ ನೆವ ಹೇಳಿ ಕಳಿಸಿದ್ದರು.
ಅಂಜನಪ್ಪ ಸತ್ತು ಆರು ವರುಷ ಆಗಿತ್ತು. ಕೆಂಪಿ ಆ ಜಾಗದಲ್ಲಿ ಕಟ್ಟಿಸಿದ್ದ apartment ಅಲ್ಲಿ ಮೂರು ಮನೆ ಕೆಲ್ಸಕ್ಕೆ ಹೋಗುತ್ತಿದ್ದಳು. ಆ ಜಾಗ ಗೌಡ್ರು ತಮ್ಮ ಮಗಳು ಶಾರದಾಳಿಗೆ ಕುಂಕುಮಕ್ಕೆ ಬರೆದಿದ್ದರು.
ಮೊಮ್ಮಗ ಊರ ಹತ್ತಿರವೇ ಇದ್ದ ಒಂದು ಕಾಲೇಜಿಗೆ ಸೇರಿ, ಇಂಜಿನಿಯರ್ ಪದವಿ ಪಡೆದು ಒಳ್ಳೆ ಕೆಲಸಕ್ಕೆ ಸೇರಿದ್ದ. ಅಜ್ಜಿ ಜೊತೆ ಇರದೇ ಬೆಂಗಳೂರಿನಲ್ಲಿ ಪಿಜಿಯೊಂದರಲ್ಲಿ ಇದ್ದ.
ಅವತ್ತು ಯಾಕೋ ಕೆಂಪಿಗೆ ತುಂಬಾ ಕೋಪ ಬಂದಿತ್ತು, ಕಿರಣ ಮನೆಗೆ ಬರಲ್ಲ. ಆ ಹಾಳು ಕೊಂಪೆಗೆ ಮತ್ತೆ ಬರಲ್ಲ, ಬೇಕಿದ್ದರೆ ನೀನೇ ಬಾ ಎಂದಿದ್ದ. ಮಗ ಎಲ್ಲಿ ಹೋದನೋ ಗೊತ್ತೇ ಇರಲಿಲ್ಲ ಕೆಂಪಿಗೆ. ಮೊಮ್ಮಗನ ಮೇಲೆ ತುಂಬಾ ಅಸೆ ಇಲ್ಲದ್ದಿದ್ದರೂ ಏನೋ ಕಾಳಜಿ. ಅಮ್ಮನಿಲ್ಲದ ಮಾಗು ಅಂತ ಅನುಕಂಪ. ಗೌಡ್ರು ಕೊಟ್ಟಿದ್ದ ದುಡ್ಡು ಅವನ ವಿದ್ಯಾಭ್ಯಾಸಕ್ಕೆ ಕೊಟ್ಟಿದ್ದರು.
ಅವನು ಚೆನ್ನಾಗಿ ಓದಿ ಅದೆಂತದೋ "ಗೂಗಲ್ಲು" ಅನ್ನೋ ಕಡೆ ಕೆಲಸಕ್ಕೆ ಸೇರಿದ್ದ. ಅಜ್ಜಿಯನ್ನ ಬೆಂಗಳೂರಿಗೆ ಕರೆದುಕೊಂಡು ಹೋಗೋಕೆ ಎಷ್ಟು ಪ್ರಯತ್ನ ಮಾಡಿದ್ರು ಈ ಅಜ್ಜಿ ಅವನ ಜೊತೆ ಹೋಗಿರಲಿಲ್ಲ. ಒಂದು ಹಿಡಿ ಜಾಗ ಮಾಡೋಕೆ ಆಗಲಿಲ್ಲ ನಮ್ಮ ಕೈಲಿ ಅಂತ ಪೇಚಾಟದ ಜೀವನ ಸಾಗಿಸುತ್ತಿದ್ದಳು.
ಮೊಮ್ಮಗ ತಂದು ಕೊಟ್ಟ ಫೋನ್, ಟಿವಿ ಎಲ್ಲಾ ಉಪಯೋಗಿಸಲು ಬರದೇ ಅಕ್ಕ ಪಕ್ಕದ ಮಕ್ಕಳ ಮನೋರಂಜನೆಗೆ ಉಪಯೋಗಿಸಲು ಕೊಡುತ್ತಿದ್ದಳು.
ಎಷ್ಟು ಹೇಳಿದರು ಕೆಲಸ ಮಾಡೋದು ನಿಲ್ಲಿಸುತ್ತಿರಲಿಲ್ಲ ಕೆಂಪಿ. ತಿಂಗಳಿಗೆ ದುಡ್ಡು ಕಳಿಸುತ್ತಿದ್ದ ಮೊಮ್ಮಗ ಅದನ್ನು ಜಾಸ್ತಿ ಉಪಯೋಗಿಸದೆ ಹಾಗೆ ಇಡುತಿದ್ದಳು.
ಊರು ಬದಲಾಗಿತ್ತು, ಊರ ಹೊರಗೆ ಎಲ್ಲವೂ ಸಿಗುತ್ತಿತ್ತು. ಊರ ಒಳಗೆ ಮಾತ್ರ ಸ್ವಲ್ಪ ದಾರಿದ್ರ್ಯ ಇತ್ತು ಅನ್ನಬಹುದು. ಎಲ್ಲಾ ಮನೆ ಮಕ್ಕಳು ಬೆಂಗಳೂರು ಸೇರಿದ್ದರು. ಒದಿ ಏನೋ ಒಂದು ಕೆಲಸ ಮಾಡುವಷ್ಟು ಬುದ್ದಿವಂತರಾಗಿದ್ದರು
ಕೆಂಪಿಗೆ ಮಾತ್ರ ಸರಿ ಹೋಗೋವಲ್ದು ಈ ಬದಲಾವಣೆ. ಎಷ್ಟೊಂದು ಜನ, ಗಾಡಿಗಳು, ಎಲ್ಲೆಲಿಂದಲೋ ಬಂದವರ ಆರ್ಭಟ. ಇದೆಲ್ಲಾ ನೋಡಿ ಒಂತರ ಕಳೆದು ಹೋಗಿದ್ದಳು ಕೆಂಪಿ. ನಿಂಗಿ ಪೆಟ್ಟಿ ಅಂಗಡಿ ಉಳಿಯಲಿ ಅಂತ ಗಂಡ ಸತ್ತ ಮೇಲೆ ವೀಳ್ಯದೆಲೆ ಮತ್ತೆ ಅಡಿಕೆ ಅವಳ ತಾವು ತೊಗೊಂಡು ಮೊಮ್ಮಗ ಕೊಟ್ಟ ದುಡ್ಡು ಕೊಡುತ್ತಿದ್ದಳು. ಹೀಗೆ ಶುರುವಾದ ಅಭ್ಯಾಸ ಮುಂದೆ ಚಟವಾಯಿತು. ಯಾವಾಗು ದವಡೆಗೆ ಸಿಕ್ಕಿಸಿಕೊಂಡೆ ಕೆಲಸ ಮಾಡುತ್ತಿದ್ದಳು.
ಅಂದು ಅಂಜನಪ್ಪ ತೀರಿಕೊಂಡಿದ್ದ ದಿನ, ಪೂಜೆಗೆ ಬಾ ಎಂದು ಹೇಳಿದ್ದರು ಮೊಮ್ಮಗ ಬಂದಿರಲಿಲ್ಲ. ಬೇಸರದಲ್ಲೇ ಗಂಡನ ಫೋಟೋ ಮುಂದೆ ವಡೆ ಪಾಯಸ ಎಲ್ಲಾ ಇಟ್ಟು ಪೂಜೆ ಮಾಡಿ ಬಿರಬಿರನೇ ಮನೆ ಕೆಲಸಕ್ಕೆ ಹೋದಳು. ಆ ಅಪಾರ್ಟ್ಮೆಂಟ್ ಮಹಿಳೆ ಯಾವುದೋ ಬೇರೆ ಊರಿನವಳು, ಲೇಟ್ ಆಗಿ ಬಂದಿದ್ದಕ್ಕೆ ಹಿಂದಿಯಲ್ಲಿ ಬಾಯಿಗೆ ಬಂದ ಹಾಗೆ ಬೈದಿದ್ದಳು. ವಯಸ್ಸು ಆಗಿರೋರು ಅಪಾರ್ಟ್ಮೆಂಟ್ ಕೆಲಸಕ್ಕೆ ಬೇಡ ಎಂದು ಅರ್ಜಿ ಕೊಡ್ತಿನಿ ಅಂತ ಧಮ್ಕಿ ಹಕ್ಕಿದ್ದಳು. ಅವಳ ಮನೆ ತುಂಬಾ ಗಲೀಜು, ಯಾರು ಹೋಗೋದಕ್ಕೆ ಹಿಂದೆ ಮುಂದೆ ನೋಡುತ್ತಿದ್ದರು. ಅಪಾರ್ಟ್ಮೆಂಟ್ ವಾಚ್ಮ್ಯಾನ್ ಕೆಂಪಿ ಪರಿಚಯದವನು. ಅವನು ಕೇಳಿದಕ್ಕೆ ಕೆಂಪಿ ಆ ಮನೆ ಕೆಲಸಕ್ಕೆ ಹೋಗುತ್ತಿದ್ದದ್ದು.
ಹಿಂದಿನ ದಿನ ಪೂಜೆಗೆ ಬಾ ಎಂದು ಪಕ್ಕದ ಮನೆ ಶ್ರುತಿ ಕೈಲಿಂದ ಫೋನ್ ಮಾಡಿ ಹೇಳಿದ್ದರು ಮೊಮ್ಮಗ ಬಂದಿಲ್ಲ ಅನ್ನುವ ನೋವು... ಈ ಕೀವಿಗೆ ತಾಕದ ಹಿಂದಿ ಬೈಗುಳದ ಮುಂದೆ ಹಿರಿದಾಗಿತ್ತು.
ಮನೆ ಕಡೆ ಹೋಗೋ ದಾರಿಲಿ ನಿಂಗಿ ಶ್ಯಾಮಣ್ಣರ ಅಂಗಡಿ, ಅಲ್ಲಿ ಸ್ವಲ್ಪ ಸುಧಾರಿಸಿಕೊಂಡು ಹೋಗೋಣ ಅಂತ ಕೂತಳು. ಕಿರಣ ಮನೆಗೆ ಬಂದಿಲ್ಲ ಅನ್ನೋ ನೋವ್ವು ಬೇರೆ ತಲೇಲಿ ಓಡುತಿತ್ತು.. ಅವ್ನು ಯಾಕೆ ಬರಬೇಕು... "ಅದೇನೋs ಅಂತರೆಲ್ಲ..ಅಪ್ಪ ಹಾಕಿದ್ ಆಲದ ಮರಕ್ಕೆ......"
ಅವಳು ಮನೆ ಸೇರಿ ಊಟ ಮಾಡುವಷ್ಟರಲ್ಲಿ ಅವಳ ಚಿಕ್ಕ ಮೊಬೈಲ್ phone ಶಬ್ದ ಮಾಡಿತ್ತು. ಅವಳು ಅದನ್ನ ಎತ್ತಿ "ಹಲಾವ್... ಯಾರು" ಎಂದಳು.
"ಅಜ್ಜಿ ನಾನು ದೇಶ ಬಿಟ್ಟು ಹೋಗ್ತಾ ಇದೀನಿ, ನನ್ನ ಜೊತೆ ನಿಶ್ಚಿತ ಇದ್ದಾಳೆ. ನಾವಿಬ್ರು ಚೆನ್ನಾಗಿದ್ದೀವಿ. ನಮಗೆ ನಿಮ್ಮ ಆಶೀರ್ವಾದ ಬೇಕು. " ಎಂದು ಕಿರಣ ಹೇಳಿ ಫೋನ್ cut ಮಾಡಿದ.
ಮೊಮ್ಮಗ ಬಿಟ್ಟು ಹೋದ ಅನ್ನೋ ಬೇಜಾರು ಏನು ಕಾಣಲಿಲ್ಲ. ಅವರವರ ಜೀವನ ಅವರವರಿಗೆ ಬಿಟ್ಟಿದ್ದು. ಊರು ಬಿಟ್ಟು ಪಟ್ಟಣ ಸೇರಿದವನ ಮೇಲೆ ಅಷ್ಟೇನು ಅವಲಂಬಿತವಾಗಿರದ ಜೀವ ಅದು. ಒಂದೆರಡು ನಿಮಿಷವಾದ ಮೇಲೆ ಏನೋ ನೆನಪಾಗಿ, Phone ಕೆಳಗಿಟ್ಟು ಮನೆ ಆಚೆ ನೆಡೆದಳು ಕೆಂಪಿ.
ಏನೋ ಬಿರುಸಿನ ಹಾಗೆ ಇತ್ತು ವಾತಾವರಣ. ಪಕ್ಕದ ಮನೆ ಶ್ರುತಿನ ವಿಚಾರಿಸಿದರೆ ಗೊತ್ತಾಗಬಹುದು ಅಂತ,
ಕೆಂಪಿ, "ಸೃತಿ .... ಸೃತಿ..... "ಎಂದರು.
ಶ್ರುತಿ "ಏನಜ್ಜಿ... ಆಯ್ತಾ ಕೆಲಸ... ಊಟ ಮಾಡಿದ್ಯಾ... Phone ಮಾಡ್ಬೇಕಾ...?"
ಕೆಂಪಿ "ಇಂದಾರೇ...ವಸಿ tv ಹಾಕು, ಹಾಡು ಹಾಕ್ತಾರೆ ಚೆನಾಗಿರೋದು ಸ್ವಲ್ಪ ಕೇಳ್ಕೊಂಡು ಮನಿಕೊಂತೀನಿ..."ಎಂದಳು
ಶ್ರುತಿ tv ಆನ್ ಮಾಡಿ ಉದಯ ಮ್ಯೂಸಿಕ್ ಹಾಕಿದಳು
ಕೆಂಪಿ ಮತ್ತೆ "ಏನ ಇಸ್ಯ ಯಾಕೆ ಪೊಲೀಸ್ ಗಾಡಿಗಳು ಎಲ್ಲಾ ಬರ್ತವೆ ಊರ ಒಳ್ಳಿಕ್ಕೆ"ಅಂದಳು.
ಶ್ರುತಿ "ಅಜ್ಜಿ ಗೌಡ್ರು ಮೊಮ್ಮಗಳು ಓಡೊಗವಳೇ.. ರಾತ್ರಿಯಿಂದ ಮನೆಗೆ ಬಂದಿಲ್ವಂತೆ".
ಕೆಂಪಿ "ಹೌದ, ಯಾರು ದೊಡ್ಡಣ್ಣನ ಮೊಮ್ಮಗಳ?"
ಶ್ರುತಿ "ಅಲ್ಲಾ ಅಜ್ಜಿ ಚಿಕ್ಕವರ ಮೊಮ್ಮಗಳು. ನಿಶ್ಚಿತ..."
Tvಯಲ್ಲಿ "No excuse me please....
ಎಲ್ರ ಕಾಲ್ ಏಳಿತದೇ ಕಾಲ .. ಹಾ ಹಾ ಹಾ.." ಅಂತ ಉಪೇಂದ್ರ ಹಾಡು ಬರೋಕೆ ಶುರುವಾಯಿತು.
ಕೆಂಪಿ ಕಣ್ಣು ಅರಳಿತು. ಇದೇ ಹುಡುಗಿ ಅಲ್ವಾ ನಮ್ಮ ಕಿರಣನ ಜೊತೆ ಓದಿದ್ದು. ಇವರಿಬ್ಬರು....., ನಕ್ಕಳು
ಕೆಂಪಿ ಅವತ್ತು ಹೊಟ್ಟೆ ತುಂಬಾ ಊಟ ಮಾಡಿ ಕಣ್ತುಂಬ ನಿದ್ದೆ ಮಾಡಿದಳು.
Comments
Post a Comment