🌼ಮೃದುಲ🌼
ಹಾಸನಕ್ಕೆ ಹೋಗುವ ಹೆದ್ದಾರಿಯಲ್ಲಿ ರೈಲ್ವೆ ಕ್ರಾಸ್ಸಿಂಗ್ ಹತ್ರ ಪೇರಲ ಹಣ್ಣು ಮಾರುತಿದ್ದ ಪುಟ್ಟ ಹುಡುಗಿಯ ಕಂಡು, ಸುಗುಣಮ್ಮ ಕೈಬೀಸಿ ಕರೆದರು.
ಅಂದು ತುಂಬಾ ಕಾರುಗಳು ನಿಂತಿದ್ದವು. ಪೇರಲ ಹಣ್ಣಿನ ವ್ಯಾಪಾರ bumper.
ಆ ಹುಡುಗಿ, ಸುಗುಣಮ್ಮ ಹಾಗು ಮೃದುಲ ಇದ್ದ ಕಾರಿನ ಬಳಿ ಬಂದು, ತನ್ನ ಬುಟ್ಟಿ ಹಿಡಿದಳು.
ಸುಗುಣಮ್ಮ ಐದು ಹಣ್ಣು ಆರಿಸಿ ತನ್ನ ಸೀರೆಯ ಜೋಳಿಗೆ ಮಾಡಿ ಬಾಗಿನ ತುಂಬಿ ಕೊಳ್ಳುವ ಹಾಗೆ ಹಣ್ಣುಗಳ ಹಾಕೊಂಡ್ರು. ಪೇರಲ ಅವರ ನೆಚ್ಚಿನ ಹಣ್ಣು, ಅದರಲ್ಲೂ ಮಾಗಿದ ಪೇರಲೇಹಣ್ಣು ಬಿಡದೇ ತಿನ್ನುತಿದ್ದರು. ಬೆಂಗಳೂರಿಗೆ ಬಂದಾಗ ಪೇರಲ ಹಣ್ಣು ಬಿಡುವ ಕಾಲ ಬಂದರು ಒಂದು ಹಣ್ಣು ತಿನ್ನದೇ ಇದ್ದರು.
ಇಲ್ಲಿ ಕಂಡ ಕೂಡಲೇ ಮಗುವಿನ ಹಾಗೆ ಮಾಗಿದ ಹಣ್ಣುಗಳ ಮೇಲೆ ಕಣ್ಣು ಹಾಯಿತು.
ಒಂದೆರಡು ಹಣ್ಣು, ಮಿಕ್ಕಿದು ಅಷ್ಟೇನೂ ಮೆತ್ತಗೆ ಇರದ ಹಣ್ಣುಗಳ ನೋಡಿ. ಸುಗುಣಮ್ಮ - "ಎಷ್ಟಾಯ್ತು?" ಎಂದರು.
ಆ ಹುಡುಗಿ "ಮೂವತ್ತು ರೂಪಾಯಿ" ಎಂದು ಒಣ ಧ್ವನಿಯಲ್ಲಿ ಉಲಿದಳು. ಅಷ್ಟರಲ್ಲಿ ಹಿಂದನ ಟೆಂಪೋ ಟ್ರಾವೆಲರ್ ನಲ್ಲಿದ್ದ ಮಹಿಳೆ "ಏ ಹುಡುಗಿ ಬಾ ಇಲ್ಲಿ " ಎಂದು ಕರಿಯಲು, ಬುಟ್ಟಿ ಹಿಡಿದು ಅಲ್ಲಿಗೆ ಓಡಿದಳು ಆ ಹುಡುಗಿ.
ಐದು ಹಣ್ಣು ಸೀರೆಯ ಜೋಳಿಗೆಯಲ್ಲಿ ತುಂಬಿಸಿದ್ದ ಸುಗುಣಮ್ಮ, ತನ್ನ ಬ್ಲೌಸ್ ಒಳಗೆ ಇಟ್ಟಿದ್ದ ಪರ್ಸ್ ತೆಗೆದು ಕಾಸು ಏಣಿಸುವಷ್ಟರಲ್ಲಿ ಕಾರ್ ರೈಲ್ವೆ ಕ್ರಾಸ್ಸಿಂಗ್ ಪಾಸ್ ಆಗಿತ್ತು.
ಸುಗುಣಮ್ಮ ಪಕ್ಕ ಕೂತಿದ್ದ ಪೋರಿ ಮೃದುಲ ಕುತೂಹಲದಿಂದ ನೂರು ,ಐನೂರರ ನೋಟು ನೋಡುತಿದ್ದಳು.
ಮೆಲ್ಲಗೆ ಪರ್ಸ್ ಒಳಗೆ ದುಡ್ಡು ಜೋಪಾನ ಮಾಡಿ ಮತ್ತೆ ಬ್ಲೌಸ್ ಒಳಗೆ ತೂರಿಸುತಿದ್ದ ಸುಗುಣಮ್ಮನ ಕಂಡು "ಅಜ್ಜಿ ಹಣ್ಣು ಬೇಕು, ತಗೋಳಿ.."
ಸುಗುಣಮ್ಮ ತನ್ನ ಸೀರೆಯಲ್ಲಿ ಮರೆ ಮಾಡಿದ್ದ ಹಣ್ಣುಗಳ ತೋರಿಸಿ, "ಯಾವುದು ಬೇಕು ತಗೋ" ಎಂದರು.
ಮೃದಲ "ಮತ್ತೆ ದುಡ್ಡೇ ಕೊಡಲಿಲ್ಲವಲ್ಲ ಅಜ್ಜಿ.."
"ಅಯ್ಯೋ ಕೊಡೋಣ ಅನ್ನುವಷ್ಟರಲ್ಲಿ ಮುಂದೆ ಬಂದುಬುಟ್ವಿ..."
ಮೃದುಲ ಕಾರಿನ ಹಿಂದಿನ ಗಾಜಿಂದ ದಿಟ್ಟಿಸಿದಳು.
ಬಹಳ ಮುಂದೆ ಸಾಗಿದ್ದ ಕಾರಣ, ಆ ಹುಡುಗಿಯಾಗಲಿ, ಅಲ್ಲಿ ಕಂಡ ಪೆಟ್ಟಿ ಅಂಗಡಿಯಾಗಲಿ ಕಾಣಲಿಲ್ಲ.
ಸುಮ್ಮನೆ ಬೇಜಾರಿನಲಿ ಕುಳಿತಳು ಮೃದುಲ.
"ಅಜ್ಜಿ, ಮೋಸ ಮಾಡ್ಬಾರ್ದು ಅಲ್ವಾ. ವಾಪಾಸ್ ಹೋಗಿ ದುಡ್ಡು ಕೊಡೋಣ ಬಾ...." ಎಂದಳು
ಸುಗುಣಮ್ಮ " ಹಾಗೆಲ್ಲಾ ಈ ಹೈವೇಲಿ ವಾಪಾಸ್ ಹೋಗೋಕೆ ಆಗೋಲ್ಲ. ಈವಾಗ ಮನೆಗೆ ಹೋಗೋಣ. ಸುಮ್ನಿರು ಐದು ಹಣ್ಣುತಾನೇ.." ಎಂದರು
ಮೃದುಲ ಕೇಳಲು ತಯಾರು ಇರಲಿಲ್ಲ.
"ಬಾ ಅಜ್ಜಿ ಹೋಗೋಣ.. Driver ಅಂಕಲ್ ವಾಪಾಸ್ ಕರ್ಕೊಂಡ್ ಹೋಗಿ.. ಹ್ಞೂ.. "ಎಂದಳು
ಸುಗುಣಮ್ಮ "ಮನೆಗೆ ಹೋಗೋಣ ಹೊತ್ತು ಅಯ್ತು, ಇನ್ನು ಬಂದಿಲ್ಲ ಅಂತ ಎಲ್ರು ಗಾಬ್ರಿ ಆಗ್ತಾರೆ" ಎಂದು ಡ್ರೈವರ್ಗೆ ಮೊಮ್ಮಗಳ ದನಿಗೆ ದನಿಗೂಡಿಸದೆ ಸುಮ್ಮನೆ ಮನೆಗೆ ಹೋಗುವ ಹಾಗೆ ತಮ್ಮ ಕಣ್ಣಲ್ಲೇ ಆಜ್ಞೆ ಮಾಡಿದರು.
ಪಕ್ಕದಲ್ಲಿ ಪುಟ್ಟಪುಟ್ಟ ಮೃದು ಕೈಗಳಿಂದ ತನಗೆ ಬೀಳುತಿದ್ದ ಏಟುಗಳನ್ನು ಪರಿಗಣಿಸದೆಯೇ, ತನ್ನ ಸೀರೆಯಲ್ಲಿ ಮಾಗಿದ್ದ ಒಂದು ಪೇರಲ ತೆಗೆದು. ಸೆರಗಿನಲ್ಲಿ ಚೆನ್ನಾಗಿ ಒರೆಸಿ, ಸವಿಯಲು ಮುಂದಾದರು ಸುಗುಣಮ್ಮ.
ಒಂದು ಗಂಟೆ ಬಳಿಕ., ತಮ್ಮ ತೋಟದ ಮನೆಗೆ ತಲುಪಿದರು ಇಬ್ಬರು. ಅತ್ತು ಅತ್ತು ಸಾಕಾಗಿ ಅಜ್ಜಿಗೆ ಮೈ ಸೋಕದ ಹಾಗೆ ಕಾರಿನಲ್ಲೇ ಮಲಗಿದ್ದಳು ಮೃದುಲ.
ಕಾರ್ ಕಂಡೊಡನೆ ಅದರ ಬಳಿ ಧಾವಿಸಿದ ಶ್ರೀಧರ, ಸುಗುಣಮ್ಮನ ಮೊದಲನೇ ಮಗ.
ಮೃದುಲ ಎರಡನೇ ಮಗನ ಮಗಳು., ರಜೆ ಇದ್ದ ಕಾರಣ ಕರೆದುಕೊಂಡು ಬಂದಿದ್ದರು ಊರಿಗೆ.
ರಾತ್ರಿ ಊಟಕ್ಕೆ ಸೋದರತ್ತೆ ಸ್ನೇಹ ಬಂದು ಎಚ್ಚರಿಸಿದರು. ಮೃದುಲ ಯಾಕೋ ಮಂಕು ಬಡಿದವಳ ಹಾಗೆ ಇದ್ದಳು.
ಏನೋ ಒಂದುಚೂರು ಊಟ ಮಾಡಿ ಅಜ್ಜಿಯ ಬಳಿ ಮಲಗುವುದಿಲ್ಲ ಎಂದು ಹಠ ಹಿಡಿದು ಸ್ನೇಹ ಅತ್ತೆಯ ಬಳಿ ಮಲಗಿದಳು.
ಹೀಗೆ ಇದಷ್ಟು ದಿನವೂ ಅಜ್ಜಿ ಕಂಡರೆ ಕೆಂಡದಂತ ಕೋಪ ಕಾರಿದಳು.
ಬೆಂಗಳೂರಿಗೆ ಹೋಗುವ ಸಮಯ ಬಂದೇ ಬಿಟ್ಟಿತು. ಮೃದಲಗೆ ಒಬ್ಬ ತಮ್ಮ ಹುಟ್ಟಿರುವುದರಿಂದ, ಸುಗುಣಮ್ಮ ಮಗ ಹಾಗು ಮೊಮ್ಮಗಳ ನೋಡಿಕೊಳ್ಳುವ ಸಲುವಾಗಿ ಬೆಂಗಳೂರಿನಲ್ಲಿರುವ ತನ್ನ ಕಿರಿಮಗನ ಮನೆಗೆ ಒಂದಷ್ಟು ತಿಂಗಳುಗಳು ಇರುವುದಾಗಿ ತೀರ್ಮಾನಿಸಿದ್ದರು.
ಹೊರಡುವಾಗ ಮುನಿಸಿನಿಂದ ಅಜ್ಜಿಯ ಮೇಲೆ ಸಿಡಿಮಿಡಿಯಾಗಿದ್ದ ಮೃದುಲಳ ಕಂಡು "ತಂದೆಯ ತಾಯಿ ಎಷ್ಟೇ ನೋಡಿಕೊಂಡ್ರು, ಅಮ್ಮನ ತಾಯಿ ಮೇಲೆ ಮೊಮ್ಮಕ್ಕಳಿಗೆ ಜಾಸ್ತಿ ಪ್ರೀತಿ" ಎಂದು ತನ್ನನ್ನು ಬೀಳ್ಕೊಡಲು ಬಂದ ಪಕ್ಕದ ಮನೆಯ ವೇಣಿಯಮ್ಮ ಹೇಳಿದ ಮಾತು ಸುಗುಣಮ್ಮನಿಗೆ ನಾಟಿದ್ದು ಹೌದು.
ಇದ್ದ ಹದಿನೈದು ದಿನಗಳು, ಅಜ್ಜಿಯಯೊಂದಿಗೆ ವ್ಯವಹಾರ ಮಾಡದೇ, ತಪ್ಪಿಸಿಕೊಂಡು ದಿನಕಳೆದಿದ್ದಳು ಮೃದುಲ.
ಅಂದು ಬೆಂಗಳೂರಿಗೆ ಹಿಂದಿರುಗುವ ದಿನ. ಕಾರಿನ ತುಂಬಾ ಸಾಮಾನು ತುಂಬಿದರು ಶ್ರೀಧರ,ಸ್ನೇಹ ಎಲ್ಲರು.
ಬಾಳೆಗೊನೆ, ಅಕ್ಕಿ, ಹಲಸು, ಉದ್ದು, ಸಪೋಟ, ಉಪ್ಪಿನಕಾಯಿ, ಕರಿದ ತಿಂಡಿಗಳು ಎಲ್ಲಾ.
ಕಾರಲ್ಲಿ ಕೂತು ಆ ಕಡೆ ಮುಖ ಮಾಡಿದ್ದ ಮೃದುಲಗೆ ರವೆ ಉಂಡೆ ಹಾಗು ಚಕ್ಕುಲಿ ಒಂದು ಪೇಪರ್ ಮೇಲೆ ಹಾಕಿ ಕೊಟ್ಟರು ಸುಗುಣಮ್ಮ.
"ಬೇಡ ನನಗೆ".. ಎಂದಳು
ಇನ್ನು ಸ್ವಲ್ಪ ಮುಂದೆ ಹೋದಮೇಲೆ ಮತ್ತೆ ಮುಖದ ಹತ್ತಿರ ಹಿಡಿದರು..
"ಬೇಡ ಅಂದ್ರೆ ಅರ್ಥ ಆಗಲ್ವಾ..."ಎಂದಳು.
ಅದನ್ನು ಪೊಟ್ಟಣ ಕಟ್ಟಿ ಅವಳ ಪಕ್ಕದಲ್ಲಿ ಇರಿಸಿದರು ಸುಗುಣಮ್ಮ.
ಸ್ವಲ್ಪ ಹೊತ್ತು ಕಳಿಯಿತು.
ಅದೇ ರೈಲ್ವೆ ಕ್ರಾಸ್ಸಿಂಗ್ ಮತ್ತೆ ಬಂತು.
ಯಾವುದೊ ಲೋಕದಲ್ಲಿ ಮುಳುಗಿದ್ದ ಮೃದುಲಳಿಗೆ ಯಾರದೋ ಧ್ವನಿ, ಎಲ್ಲೋ ಕೇಳಿದ ಹಾಗೆ ಇದ್ಯಲ್ಲ..ಎಂದನಿಸಿ ತಿರುಗಿದಳು.
ಅದೇ. ಅವತ್ತು ಪೇರಲ ಮಾರುತ್ತಿದ್ದ ಹುಡುಗಿ.
"ಅವಳ ಹಿಂದೆ ಯಾರದು....? "ಎಂದು ಕಾರಿನ ಕಿಟಕಿಯಿಂದ ನೋಡಿದಳು.
ಸುಗುಣಮ್ಮ ಮಾತಾಡುತ್ತ ಇದ್ದರು.
ಆ ಹುಡುಗಿಯ ಅಜ್ಜಿ ಇರಬೇಕು "ಏನ ಯೋಳೋದು ಈ ಹುಡುಗಿಗೆ.. ಯಾಪಾರ ಮಾಡೋಕೆ ಬರವಲ್ದು ಕಣ್ರಮ್ಮ.. ಎಟ್ ಕಿತ ಯೋಳಿವ್ನಿ.. ಒಬ್ಬರತ್ರ ಯಾಪಾರ ಮುಗಿಸ್ಕೊಂಡು ಆಮೇಕೇ ಬೇರೆವ್ರು ತಾವ್ ಹೋಗ್ ಬೇಕ್ ಅಮ್ಮಿ ಅಂತ.. ನನ್ ಮಾತ್ ಕೇಳಲ್ರು.. ಅವ್ರುದೆಯಾ ನೆಡ್ಸೋದು... ನೀವು ಒಳ್ಳೇವ್ರು ದುಡ್ಡು ಗೆಪ್ತಿ ಮಡಿಕೊಂಡು , ಕಾರ್ ನಿಲ್ಸಿ ಕೊಟ್ರಿ.. ಎಲ್ಲ್ರು ಹಿಂಗಿರಾಲ್ರು.. ಕೊಟ್ಟೂನು ಕೋಡಂಗಿ ಇಸ್ಕೊಂಡೋನು ಇರ್ಭದ್ರ ಅಂತ ಹೋಯ್ತಾ ಇರ್ತಾರೆ..." ಅಂತ ಒಂದೇ ಸಮನೆ ಮಾತು ಆಡುತಿದ್ದರು.
ಅಜ್ಜಿ ಕೊಟ್ಟಿದ್ದ ರವೆ ಉಂಡೆ ಚಕ್ಕುಲಿ ಪೊಟ್ಟಣ ಕೈಯಲ್ಲಿ ಹಿಡಿದು ಕಾರಿನಿಂದ ಇಳಿದು. ಅಲ್ಲೇ ಅಪರಾಧಿ ಭಾವನೆ ಹೊತ್ತು ನಿಂತಿದ್ದ ಆ ಹುಡುಗಿಯ ಬಳಿ ಬಂದು ಅವಳಿಗೆ ಒಂದು ನಗು ಬೀರಿ ಪೊಟ್ಟನ ಬಿಡಿಸಿ ಕೊಟ್ಟುಳು. ಕರಿದ ತಿಂಡಿ ನೋಡಿದ ಕೂಡಲೇ ಹಲ್ಲುಗಿಂಜಿ ನಕ್ಕು ರವೆ ಉಂಡೆ ತೆಗೆದು ಬಾಯಿಗೆ ಹಾಕೊಂಡು ಪೊಟ್ಟನವ ಇಸಿಕೊಂಡಳು ಆ ಹುಡುಗಿ.
ಮೃದುಲ ಮೆಲ್ಲಗೆ ಬಂದು ಸುಗುಣಮ್ಮನ ಪಕ್ಕ ನಿಂತು ಅವರ ಕೈ ಹಿಡಿದಳು.
ತಣ್ಣಗೆ ಇದ್ದ ಆ ಮೃದುಕೈಗಳು ಸೋಕಿದ ಕೂಡಲೇ ಸುಗುಣಮ್ಮನಿಗೆ ಏನೋ ಕಳೆದು ಹೋಗಿದ್ದದ್ದು ಹಿಂತಿರುಗಿ ಸಿಕ್ಕಿದಂತೆ ಆಯಿತು.
"ಎಲ್ಲೇ ಇದ್ದರು ನಮ್ಮ ಮೊಮ್ಮಕ್ಕಳೆ, ಅವರಿಗೆ ಇಷ್ಟ ಆಗುವ ಹಾಗೆ ನಾವು ಸಣ್ಣ ಪುಟ್ಟ ಕೆಲಸ ಮಾಡಿದ್ರೆ ಇನ್ನು ಹತ್ರ ಅಗುತೀವಿ ವೇಣಿಯಮ್ಮ" ಎಂದು ಅಂದು ಆಡಿದ ಮಾತು ಸುಗುಣಮ್ಮನ ನೆಡವಳಿಕೆಯಲ್ಲೂ ಕಂಡಿತ್ತು.
ಬೆಂಗಳೂರು ಸೇರುವಷ್ಟರಲ್ಲಿ ಅವರಿಬ್ಬರಲ್ಲೂ ಆಳವಾದ ಬಂಧ ಚಿಗುರೊಡೆದಿತ್ತು.
ಚೆನ್ನಾಗಿದೆ ಕಥೆ , ಆದ್ರೆ ದೊಡ್ಡೋರು ಚಿಕ್ಕವರಿಗೆ ಒಳ್ಳೆ ಪ್ರೇರೇಪಣೆ ಕೊಡ್ಬೇಕಲ್ವಾ , ಮೊಮ್ಮೊಗಳ ಮನಸ್ಸನ್ನು ಯಾಕೆ ನೋಯಿಸಬೇಕು ?
ReplyDeleteದೊಡ್ಡವರು ತಪ್ಪು ಮಾಡಬಾರದು ಅಂತ ಏನು ಇಲ್ಲಾ. ಅದನ್ನು ಸರಿಪಡಿಸುವ ವಿಧಾನ ಹಾಗು ಮನಸ್ಸು ಬೇಕು ಅಷ್ಟೇ.
Delete