ಕಾಗದದ ದೋಣಿ ⛵️

ಅವತ್ತು ಮಧ್ಯಾಹ್ನ ಉರಿ ಬಿಸಿಲು, ತುಂಬಾ ಕೆಲಸ. ಫ್ಯಾನಿಗೆ ಬಿಡುವಿಲ್ಲದೆ ತಿರು-ತಿರುಗಿ ಸುಸ್ತಾಗಿತ್ತು. ಮನಸ್ಸು ಮಳೆಯಾಗಲಿ ಎಂದು ಬೇಡುತ್ತಿತ್ತು.
​ಹಠಾತ್ ಸಿಡಿಲ ಶಬ್ದ ಕೇಳಿಸಿತು.

​ನೋಡ-ನೋಡುತ್ತಲೇ ಕೋಣೆಯ ತುಂಬಾ ಕತ್ತಲೆ ಆವರಿಸಿತು. "ದಡ್" ಎಂದು ಮತ್ತೊಂದು ಸಿಡಿಲು ಬಡಿದು ನನ್ನನ್ನು ತಾರಸಿಗೆ ಹೊತ್ತೊಯ್ಯಿತು.

​ತಾರಸಿಯಲ್ಲಿ ಅಮ್ಮ "ಬಟ್ಟೆ ತೆಗಿ ಬೇಗ, ಮಳೆ ಬರುವ ಹಾಗಿದೆ" ಅಂತ ಕೂಗಿದರು. ಇತ್ತ ಅಜ್ಜಿ ಮಜ್ಜಿಗೆ ಮೆಣಸಿನಕಾಯಿ ಇದ್ದ ಮೋರ, ಹಪ್ಪಳ, ಒಣಗಿ ಹಾಕಿದ್ದ ಸೀರೆ - ಇವೆಲ್ಲವನ್ನೂ ಎರಡು ಕೈಲಿ ಹಿಡಿದು ಬಿರಬಿರನೆ ಮೆಟ್ಟಿಲು ಇಳಿದು ಹೋದರು.

​ಅಮ್ಮನ ಕೂಗಾಟ ನನಗೆ ತಾಕೇ ಇಲ್ಲ ಎಂಬಂತೆ, ಆಕಾಶಕ್ಕೆ ಮುಖವೊಡ್ಡಿ ನನ್ನೆರಡು ಕೈಗಳನ್ನು ಚಾಚಿ ಮಳೆಯ ಬರುವಿಕೆಗೆ ಕಣ್ಮುಚ್ಚಿ ನಿಂತೆ.

ಆ ಮೊದಲ ಹನಿಯು ಹಣೆಗೆ ಬೊಟ್ಟು ಇಟ್ಟಾಗ, ನನ್ನ ತನುವೆಲ್ಲ ಕಂಪಿಸಿ, ಯಾರೋ ಅಪ್ಪಿದ ಹಾಗೆ ಅನಿಸಿತು. ಸ್ವಲ್ಪ ನಗು ಚೆಲ್ಲಿ ಮತ್ತೆ ಮೋಡವ ದಿಟ್ಟಿಸಿ ನೋಡಲು, ಸಣ್ಣ ಸಣ್ಣ ನೀರ ಮಣಿಗಳು ನನ್ನ ಬಳಿ ಧಾವಿಸಿ ಬಂದಂತೆ ಅನಿಸಿತು.

​ವರ್ಷದ ಪ್ರಥಮ ವರ್ಷಧಾರೆ. 🌧️🌧️
ಕಾದ ಇಳೆ ಮೊದಲ ಮಳೆಗಾಗಿ ಅದೆಷ್ಟು ಕಾಯುತ್ತಿತ್ತೋ ಎಂಬಂತೆ, ಮಳೆ ಹನಿಗಳ ಚುಂಬನಕ್ಕೆ ಪುಳಕಗೊಂಡು ಘಮ್ ಎಂದು ಪರಿಮಳ ಸೂಸಲಾರಂಭಿಸಿತು. "ಭೂಮಿ" ಸುಗಂಧದ ಮನೆಯಾಗಿಸಿ, ಒಣಗಿದ ಗಿಡ ಮರಗಳಿಗೆ ಮರುಚೇತನ ನೀಡಿ, ಪ್ರಾಣಿ ಪಕ್ಷಿಗಳಿಗೆ ಉಚಿತ ಸ್ನಾನ ಮಾಡಿಸಿತು. ಮಳೆ ನನ್ನ ಮೈಮನಗಳನ್ನು ಆವರಿಸಿತು. ಏನನ್ನೂ ಯೋಚಿಸದೆ ಆಹ್ಲಾದಕರ ಅನುಭವದಲ್ಲಿ ಮುಳುಗಿದ್ದ ನನಗೆ, ಏನೋ ತೋಚಿತು.

​ತಾರಸಿಯ ಮುಂಭಾಗಕ್ಕೆ ಬಂದು ಬಾಗಿ ನೋಡಿದೆ. ರಸ್ತೆಯಲ್ಲಿದ್ದ ಹೊಂಡ ವೇಗವಾಗಿ ತುಂಬುತ್ತಿದೆ. ನಾ ಅರೆಕ್ಷಣವೂ ಹಾಳು ಮಾಡದೆ, ಕೆಳಗೆ ಇಳಿದು ಬಂದು ಮೇಜಿನ ಮೇಲಿದ್ದ ದಿನಪತ್ರಿಕೆಯನ್ನು ಹರಿದು, ಒಂದು ಕಾಗದದ ದೋಣಿ ಮಾಡಲು ಮುಂದಾದೆ.
​ಅಮ್ಮ "ಇವಳಿಗೆ ದೆವ್ವ ಮೆಟ್ಟಿದೆ, ಮೆಟ್ಟಿಲೆಲ್ಲಾ ನೀರು, ಮನೆಯೆಲ್ಲಾ ಒದ್ದೆ ಒದ್ದೆ. ಮಳೆಯಲ್ಲಿ ನೆಂದು ಬಂದು ನಿಂತಿರೋದು ನೋಡು" ಅಂತ ಅಜ್ಜಿ ಹತ್ತಿರ ಗೊಣಗಾಡುತ್ತಿದ್ದಳು.

​ನನಗೆ ಮೆಟ್ಟಿರುವುದು ದೆವ್ವವಲ್ಲ, ಅದು... ಮಗು ಮನಸ್ಸಿನ ಆಸೆ, ನಿಮಗೆ ಅರ್ಥವಾಗಲ್ಲ ಬಿಡಿ ಅಂದುಕೊಂಡೆ. ಕಾಗದದ ದೋಣಿ ಮಾಡಿ ರಸ್ತೆ ಬದಿಯ ಹೊಂಡದಲ್ಲಿ ಬಿಡಬೇಕು ಎನ್ನುವ ಆಸೆ.
​ನಾ ದೋಣಿಯನ್ನು ಮಾಡಿ ಬಾಗಿಲ ಬಳಿಗೆ ಧಾವಿಸಿದೆ. ಬಾಗಿಲು ತೆರೆಯಲು ಅಪ್ಪ ಕಂಡರು. ಮಳೆಯಲ್ಲಿ ನೆನೆದಿದ್ದ ಅಪ್ಪ, ಮನೆ ಒಳಗೆ ಬರಲು ಅವಸರದಲ್ಲಿ ಮುನ್ನುಗ್ಗಿದರು. ನನ್ನ ತೊಯ್ದ ಅವತಾರ ನೋಡಿ "ಮನೆ ಒಳಗೂ ಮಳೆ ಬರ್ತಿದೆಯಾ? ಯಾಕೆ ನೆಂದಿದ್ದೀಯಾ?" ಎನ್ನುತ್ತಾ ನನ್ನ ಕೈಲಿದ್ದ ಕಾಗದದ ದೋಣಿ ನೋಡಿ, ಕಿರುನಗೆ ಬೀರಿ ಆಚೆ ಹೋಗಲು ಜಾಗ ಕೊಟ್ಟು ಒಳಗೆ ಹೋದರು.

​ಅಲ್ಲಿಂದ ಅಮ್ಮ "ತಡೆಯಿರಿ ಅವಳನ್ನ, ಚಿಕ್ಕ ಹುಡುಗಿಯಂತೆ ಬೀದಿಯಲ್ಲಿ ನಿಂತು ಕಾಗದದ......" ಅಷ್ಟೇ ಕೇಳಿಸಿದ್ದು ನನಗೆ.

ಹೊಂಡದಲಿ ಹರಿಬಿಟ್ಟ ದೋಣಿ ಹನಿಗಳ ಹಾವಳಿಗೆ ಮುಳುಗಬಹುದೆಂದು ನನ್ನ ವಲ್ಲಿ ಹಿಡಿದು, ಮುಳುಗದಿರಲಿ ಎಂದು ಪ್ರಾರ್ಥಿಸಿದೆ. ಮಳೆ ಹನಿಗಳ ರಭಸಕ್ಕೆ ಸಿಕ್ಕಿ ಚಲಿಸದೇ ನಿಂತಿದ್ದ ಕಾಗದದ ದೋಣಿ ಮುಂದೆ ಸಾಗಲು ಶುರುವಾಯಿತು.

ಅರೆ, ಮಳೆ ನಿಂತು ಹೋಯಿತಾ, ಅಂತ ತಲೆ ಎತ್ತಿ ನೋಡಲು ಅಪ್ಪ ಛತ್ರಿ ಹಿಡಿದು ನಿಂತಿದ್ದರು.😊

ಕಾಗದದ ದೋಣಿ ಮುಳುಗಲಿಲ್ಲ, ಅದಕ್ಕೆ ಜೊತೆಯಾಗಿ ನೆರೆಹೊರೆಯ ಮಕ್ಕಳ ದೋಣಿಗಳು ಸೇರಿದವು.


'ಮಳೆ ಬರುವ ಕಾಲಕ್ಕೆ ಒಳಗ್ಯಾಕ ಕುಂತೇವು ಇಳೆಯೊಡನೆ ಜಳಕವಾಡೋಣು, ನಾವೂನು, ಮೋಡಗಳ ಆಟ ನೋಡೋಣು.' ~ ದ. ರಾ.ಬೇಂದ್ರೆ



Comments

Post a Comment

Popular posts from this blog

No pictures, but memories for lifetime

ನಮ್ಮ ಊರಿನಲ್ಲಿ ಶೂಟಿಂಗ್ - ೧